ಬೆಂಗಳೂರು : ಕಾರು ಪ್ರಿಯರ ಜೇಬಿಗೆ ಕತ್ತರಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೆಲವು ವರ್ಷಗಳಿಂದ ವಿವಿಧ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ಇದೀಗ, ಡೀಸೆಲ್ ಕಾರುಗಳ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹಾಕಲು ಮುಂದಾಗಿದೆ.
ಹೌದು, ಕೇಂದ್ರ ಸರ್ಕಾರ ಡೀಸೆಲ್ ಕಾರುಗಳ ಮೇಲೆ ಶೇ.10ರಷ್ಟು ತೆರಿಗೆ ಹೆಚ್ಚಳ ಮಾಡಲು ಯೋಜಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾತನಾಡುವಾಗ ಈ ಸುಳಿವು ನೀಡಿದ್ದಾರೆ. ಡೀಸೆಲ್ ಕಾರು ತಯಾರಿಕೆಯನ್ನು ನಿಲ್ಲಿಸುವಂತೆ ಅವರು ವಾಹನ ತಯಾರಕ ಕಂಪನಿಗಳಿಗೆ ಸೂಚ್ಯವಾಗಿ ತಿಳಿಸಿದ್ದಾರೆ.
ನಿತಿನ್ ಗಡ್ಕರಿ ಹೇಳಿದ್ದೇನು?
ಡೀಸೆಲ್ ವಾಹನಗಳ ಮೇಲೆ ಹಾಗೂ ಡೀಸೆಲ್ನಿಂದ ಚಾಲನೆಯಾಗುವ ಎಲ್ಲಾ ಎಂಜಿನ್ಗಳ ಮೇಲೆ ಹೆಚ್ಚುವರಿ ಶೇ.10ರಷ್ಟು ಜಿಎಸ್ಟಿ ಹೇರಲು ನಿರ್ಧರಿಸಲಾಗಿದೆ. ನನ್ನ ಬಳಿ ಪತ್ರ ಸಿದ್ಧವಾಗಿದೆ. ಈ ಪತ್ರವನ್ನು ಸಂಜೆಯೇ ಹಣಕಾಸು ಸಚಿವರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದಾರೆ.