ಬೆಂಗಳೂರು : ಖಾಸಗಿ ವಾಹನ ಚಾಲಕರ ಒಕ್ಕೂಟ ನಾಳೆ (ಸೆ.11 ರಂದು) ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಸಂಚಾರಕ್ಕೆ ಸಮಸ್ಯೆ ಆಗಬಾರದು ಎಂಬ ದೃಷ್ಟಿಯಿಂದ 500 ಹೆಚ್ಚುವರಿ BMTC ಬಸ್‌ಗಳನ್ನು ಬಿಡಲು ಸಿದ್ಧತೆ ನಡೆದಿದೆ.
ಸೋಮವಾರ ಮುಂಜಾನೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಹೆಚ್ಚುವರಿ ಬಸ್‌ಗಳು ನಗರದಲ್ಲಿ ಸಂಚರಿಸಲಿವೆ. ಮುಖ್ಯವಾಗಿ ಏರ್ಪೋರ್ಟ್, ಸರ್ಜಾಪುರ, ಅತ್ತಿಬೆಲೆ, ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಯಲಹಂಕ, ವೈಟ್ ಫೀಲ್ಡ್ ಹಾಗೂ ಔಟರ್ ರಿಂಗ್ ರಸ್ತೆ ಭಾಗದಲ್ಲಿ ಹೆಚ್ಚುವರಿ ಬಸ್ ಸೇವೆ ಒದಗಿಸಲು ನಿರ್ಧರಿಸಲಾಗಿದೆ. ಅಲ್ಲದೇ ಪ್ರಯಾಣಿಕರ ದಟ್ಟಣೆ ಅನುಸಾರ ಬಸ್ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಾದ್ಯಂತ 500 ಹೆಚ್ಚುವರಿ ಬಸ್‌ಗಳು ರಸ್ತೆಗಿಳಿಯಲಿದ್ದು, ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಹೆಚ್ಚುವರಿ ಬಸ್‌ಗಳು ಓಡಾಡಲಿವೆ. 500 ಬಸ್‌ಗಳು ಹೆಚ್ಚುವರಿಯಾಗಿ 4000 ಟ್ರಿಪ್ಗಳನ್ನ ನಡೆಸಲಿವೆ ಎಂದು BMTC ಟ್ರಾಫಿಕ್ ಕಂಟ್ರೋಲರ್ ವಿಶ್ವನಾಥ್ ಮಾಹಿತಿ ನೀಡಿದ್ದಾರೆ.
ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ಲ್ಯಾನ್
ನಾಳೆ ಖಾಸಗಿ ವಾಹನಗಳ ಒಕ್ಕೂಟ ಬೆಂಗಳೂರು ಬಂದ್ ಮಾಡಲು ನಿರ್ಧರಿಸಿದ್ದು, ಸಿಲಿಕಾನ್ ಸಿಟಿಯನ್ನ ಖಾಸಗಿ ವಾಹನ ಚಾಲಕರು ನಾಳೆ ಅಷ್ಟ ದಿಕ್ಕುಗಳಿಂದಲೂ ಸುತ್ತುವರೆಯಲಿದ್ದಾರೆ. ಮೆರವಣಿಗೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ಲ್ಯಾನ್ ಹಾಕಿದ್ದು, ನೆಲಮಂಗಲ, ವೈಟ್ ಫೀಲ್ಡ್, ಕೆಂಗೇರಿ, ಕೆ.ಆರ್.ಪುರ, ಹೆಬ್ಬಾಳದಿಂದ ದೊಡ್ಡಮಟ್ಟದ ರ್ಯಾಲಿಗೆ ಪ್ಲ್ಯಾನ್ ಹಾಕಿಕೊಂಡಿದ್ದಾರೆ.
ರ್ಯಾಲಿ ಹತ್ತಿಕ್ಕಲು ಪೊಲೀಸರೇನಾದರೂ ಪ್ರಯತ್ನಿಸಿದ್ರೆ, ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟನೆ ನಡೆಸಲು ಸಂಘಟನೆಗಳು ಪ್ಲ್ಯಾನ್ ಹಾಕಿಕೊಂಡಿವೆ. ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಚಾಲಕರು ಬರಲಿದ್ದಾರೆ.
— BMTC (@BMTC_BENGALURU) September 10, 2023