ಶಿವಮೊಗ್ಗ : ಶ್ರಾವಣ ಮಾಸದ ಸಂಭ್ರಮದ ಹಿನ್ನೆಲೆ ಲಕ್ಷಾಂತರ ಭಕ್ತರು ಬಂದು ರೇಣುಕಾಂಬೆ ದರ್ಶನ ಪಡೆದಿದ್ದಾರೆ.
ಸೊರಬ ತಾಲೂಕಿನ ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಾಲಯದಲ್ಲಿ ಶ್ರಾವಣ ಶುಕ್ರವಾರ ಸಂಭ್ರಮದ ಹಿನ್ನೆಲೆ ನಿಮಿತ್ತ ಲಕ್ಷಾಂತರ ಭಕ್ತರು ಆಗಮಿಸಿ, ಶ್ರೀ ದೇವಿಯ ದರ್ಶನ ಪಡೆದು ಕಣ್ತುಂಬಿಕೊಂಡಿದ್ದಾರೆ. ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಲಾಗಿದ್ದು, ದೇವಿಯ ಸನ್ನಿಧಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಬಳಿಕ ದೇವಸ್ಥಾನದಲ್ಲಿ ಮಹಿಳಾ ಭಕ್ತರ ಸಂಖ್ಯೆಯು ದ್ವಿಗುಣವಾಗಿದ್ದು, ಆಗಮಿಸಿರುವ ಭಕ್ತರ ಸಂಖ್ಯೆಯು ಸಹ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ ಭಾಗದ ಭಕ್ತರ ದಂಡು ಕೂಡ ರೇಣುಕಾಂಬ ದೇವಿಯ ದರ್ಶನಕ್ಕೆಂದು ಹರಿದು ಬಂದಿದ್ದರು.
ಇದನ್ನು ಓದಿ : ಸೆ.11ಕ್ಕೆ ಬೆಂಗಳೂರು ಬಂದ್!
ಇನ್ನೂ ಪರಿವಾರ ದೇವರುಗಳಿಗೂ ವಿಶೇಷ ಪೂಜಾ ಕೈಂಕರ್ಯಗಳು ಸಹ ಜರುಗಿದ್ದವು. ಬಳಿಕ ತಾಯಿಯ ಸನ್ನಿಧಿಯಲ್ಲಿ ಭಕ್ತರು ಹರಕೆ ಸಲ್ಲಿಸಿ, ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ್ದರು. ದೇವಸ್ಥಾನದ ಆವರಣದಲ್ಲಿ ಕುಟುಂಬ ಸಮೇತರಾಗಿ ಬಂದು ಭೋಜನ ಮಾಡುವ ದೃಶ್ಯ ಸಹ ಕಂಡು ಬಂದಿತ್ತು. ಹಾಗೆಯೇ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆ ಸಮಸ್ಯೆಯಾಗದಂತೆ ಹಾಗೂ ಜನದಟ್ಟಣೆಯಾಗಂತೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಇನ್ನೂ ಮಳೆಯ ನಡುವೆಯೂ ರಥ ಬೀದಿಯಲ್ಲಿ ವ್ಯಾಪಾರ ವಹಿವಾಟುಗಳು ಜೋರಾಗಿಯೇ ನಡೆಯಿತು. ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯುವ ಮೂಲಕ ದೇವಿಗೆ ಭಕ್ತಿಯ ಪರಾಕಾಷ್ಠೆ ಮೆರೆದರು.