ಚನ್ನೈ: ಸನಾತನ ಧರ್ಮದ ಕುರಿತು ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ವಿವಾದಾದಾತ್ಮಕ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಪುತ್ರ ನರಮೇಧದ ಹೇಳಿಕೆಯನ್ನೇನೂ ಕೊಟ್ಟಿಲ್ಲ ಅಂತಾ ಅವರು ಸಮರ್ಥನೆ ನೀಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಉದಯನಿಧಿಯನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದಯನಿಧಿ ಅವರು ಸನಾತನ ಧರ್ಮದಲ್ಲಿನ ದಬ್ಬಾಳಿಕೆಯ ತತ್ವಗಳ ವಿರುದ್ಧ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಿಜೆಪಿ ಪರ ಶಕ್ತಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿ, ಸನಾತನ ಚಿಂತನೆಯ ಜನರ ನರಮೇಧಕ್ಕೆ ಉದಯನಿಧಿ ಕರೆ ನೀಡಿದ್ದಾರೆ ಎಂದು ಆರೋಪಿಸಿ ಅಪಪ್ರಚಾರ ನಡೆಸಿದ್ದಾರೆ ಎಂದು ಸ್ಟಾಲಿನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಟೀಕಾಕಾರರೊಂದಿಗೆ ಏಕೆ ಸೇರುತ್ತಿದ್ದಾರೆ. ಅವರ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ಉದಯನಿಧಿ ಅವರು ತಮಿಳು ಅಥವಾ ಇಂಗ್ಲಿಷ್‌ನಲ್ಲಿ ‘ಜನಾಂಗೀಯ ಹತ್ಯೆ’ ಎಂಬ ಪದವನ್ನು ಎಂದಿಗೂ ಬಳಸಲಿಲ್ಲ. ಆದರೂ, ಸುಳ್ಳುಗಳನ್ನು ಹೇಳಿ ಪ್ರಸಾರ ಮಾಡಲಾಗುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.