ಬೆಳಗಾವಿ : ಭಾರತ್ ಹೆಸರು ಬದಲಾವಣೆ ಸೀದಾ ಸಾದಾ ಇದ್ರೆ ಓಕೆ, ಅದರ ಹಿಂದೆ ರಾಜಕೀಯ ಲಾಭ ಇರಬಾರದು ಅಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ್ ಮರುನಾಮಕರಣ ಬಗ್ಗೆ ಕೇಂದ್ರ ಚಿಂತನೆ ಮಾಡಿರುವ ಬಗ್ಗೆ ಬೆಳಗಾವಿಯಲ್ಲಿ ಅವರು ಮಾತನಾಡಿದರು.
ರಾಜಕೀಯ ವಿಷಯ ಬೇರೆ, ಭಾರತ ಸರ್ಕಾರ ಅಂತ ನಾವು ಮೊದಲಿನಿಂದಲೂ ಹೇಳ್ತೀವಿ. ಇದರಲ್ಲಿ ಹೊಸದು ಏನಿದೆ? ಭಾರತ, ಇಂಡಿಯಾ, ಹಿಂದೂಸ್ತಾನ್ ಅಂತ ಒಂದೊಂದು ಕಾಲದಲ್ಲಿ ಹೆಸರು ಉಲ್ಲೇಖ ಮಾಡಲಾಗಿದೆ. ನಾವು ಮೂಲ ಭಾರತೀಯರು ಅಂತಾನೆ ಹೇಳ್ತಿವಿ. ಹೊರ ದೇಶದಲ್ಲಿ ಹೋದಾಗ ಇಂಡಿಯಾ, ಹಿಂದೂಸ್ತಾನ್, ಭಾರತ ಅಂತ ಕರೆಯುತ್ತೇವೆ. ಇದೇನು ಚರ್ಚೆ ವಿಷಯವೇ ಅಲ್ಲ ಎಂದು ತಳ್ಳಿ ಹಾಕಿದರು.
ಹೆಸರು ಚೇಂಜ್ ಮಾಡೋಕೆ ಆಗುತ್ತಾ?
I.N.D.I.A (ಇಂಡಿಯಾ) ಎಂಬ ಮಿತ್ರ ಪಕ್ಷಗಳ ಒಕ್ಕೂಟದ ಎಫೆಕ್ಟ್ ಆಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ರಾಜಕೀಯ ವಿಚಾರ ಅದು ಬೇರೆ. ಯಾವೋದು ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಹೆಸರು ಚೇಂಜ್ ಮಾಡುವುದಕ್ಕೆ ಆಗುತ್ತಾ? ನೂರಾರು ವರ್ಷಗಳಿಂದ ಭಾರತ್ ಎನ್ನುವ ಹೆಸರಿನಿಂದ ಕರೆಯುತ್ತಿದ್ದೇವೆ. ಈ ಬಗ್ಗೆ ಬಿಜೆಪಿಯವರೇ ಹೇಳಬೇಕು. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ ಅನೋದು ನನ್ನ ಭಾವನೆ. ಆದರೆ, ರಾಜಕೀಯ ಮಾಡಬಾರದು ಎಂದು ಹೇಳಿದರು.
ಕನ್ನಡಕ್ಕೆ ಭಾಷಾಂತರ ಆಗಲಿ
ಸನಾತನ ಧರ್ಮದ ಬಗ್ಗೆ ಸ್ಟಾಲಿನ್ ಪುತ್ರ ಲಘುವಾಗಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಅವರ ಭಾಷಣ ತಮಿಳಿನಲ್ಲಿ ಇದೆ. ಅದು ಕನ್ನಡಕ್ಕೆ ಮತ್ತು ಇಂಗ್ಲಿಷ್ಗೆ ಭಾಷಾಂತರ ಆಗಲಿ. ಆಗ ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಜಾರಿಕೊಂಡರು.