ಬೆಂಗಳೂರು : ಕಾಫಿ ಕುಡಿಯುತ್ತಿದ್ದ ಡಿಎಂಕೆ ಮುಖಂಡನ ಮೇಲೆ ಮಚ್ಚು ಹಾಗೂ ಲಾಂಗ್ನಿಂದ ಅಟ್ಯಾಕ್ ಮಾಡಿರುವ ಘಟನೆ ಬೆಂಗಳೂರಿನ ಬಾಣಸವಾಡಿಯ ಕಮ್ಮನಹಳ್ಳಿಯಲ್ಲಿರುವ ಹೊಟೇಲ್ ಬಳಿ ನಡೆದಿದೆ.
ತಮಿಳುನಾಡಿನಿಂದ ಕಾರಿನಲ್ಲಿ ಫಾಲೋ ಮಾಡಿಕೊಂಡು ಬಂದ ಐವರ ಗ್ಯಾಂಗ್ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಡಿಎಂಕೆ ಮುಖಂಡನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುಸ್ವಾಮಿ (55) ತಮಿಳುನಾಡಿನ ಮೋಸ್ಟ್ ವಾಟೆಂಡ್ ರೌಡಿ ಶೀಟರ್. ತನ್ನ ಸ್ನೇಹಿತನ ಜೊತೆ ಕಾಫಿ ಕುಡಿಯೋದಕ್ಕೆ ಸುಖಸಾಗರ್ ಹೋಟೆಲ್ ಗೆ ಬಂದಿದ್ದ. ಹೋಟೆಲ್ ನಲ್ಲಿ ಕಾಫಿ ಕುಡಿತಿದ್ದ ಗುರುಸ್ವಾಮಿಗೆ ತನ್ನ ನೆತ್ತರ ಹರಿಯುತ್ತೆ ಅಂತ ಗೊತ್ತೆ ಇರಲಿಲ್ಲ. ನಾರ್ಮಲ್ ಆಗಿ ಕಾಫಿ ಕುಡಿತಿದ್ದ ಗುರುಸ್ವಾಮಿ ಮೇಲೆ ಏಕಾಏಕಿ ಹಂತಕರು ಲಾಂಗ್-ಮಚ್ಚು ಬೀಸಿದ್ದಾರೆ.
20 ಕೇಸ್ಗಳಲ್ಲಿ ಭಾಗಿ
ತಮಿಳುನಾಡಿನ ಮಧುರೈ ಮೂಲದ ಗುರುಸ್ವಾಮಿ ಮೇಲೆ ಒಂದಾಲ್ಲ ಎರಡಲ್ಲ ಬರೋಬ್ಬರಿ 20 ಕೇಸ್ ಗಳಿವೆ. ಎಂಟು ಕೊಲೆ, 7 ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರೋ ಗುರುಸ್ವಾಮಿ ಕಿರುತುರೈ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಕೂಡ. ಈ ಗುರುಸ್ವಾಮಿ ಸಂಬಂಧಿಯೊಬ್ಬ ಇದ್ದಾನೆ. ಅವನ ಹೆಸರು ಪಾಂಡಿಯನ್ ಅಂತ.
ಇವರಿಬ್ಬರ ಮಧ್ಯೆ ಹಲವು ಬಾರಿ ಗ್ಯಾಂಗ್ ವಾರ್ ಕೂಡ ನಡೆದಿತ್ತು. ಮಧುರೈನ ಎಲೆಕ್ಷನ್ ವಿಚಾರವೊಂದರಲ್ಲಿ ಇಬ್ಬರು ಜಗಳ ಕೂಡ ಮಾಡಿಕೊಂಡಿದ್ರು. ಪಾಂಡಿಯನ್ ಗ್ಯಾಂಗ್ ನ ಸದಸ್ಯರೇ ಇವತ್ತು ಸಂಜೆ ಅಟ್ಯಾಕ್ ಮಾಡಿರಬೇಕು ಅನ್ನೋ ಶಂಕೆ ಕೂಡ ಇದೆ. ಇದೇ ವಿಚಾರದಲ್ಲಿ ಪೊಲೀಸರ ತಂಡ ಮಧುರೈಗೆ ಕೂಡ ಹೋಗಿವೆ.
ಬಾಡಿಗೆ ಮನೆ ಹುಡುಕಲು ಬಂದಿದ್ದ
ತಮಿಳುನಾಡಿನಲ್ಲಿ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಗುರುಸ್ವಾಮಿ ಬೆಂಗಳೂರಿನಲ್ಲಿ ವಾಸ ಮಾಡಲು ನಿನ್ನೆ ಬಂದಿದ್ದ. ರಿಯಲ್ ಎಸ್ಟೇಟ್ ಎಜೆಂಟ್ ನ ಜೊತೆ ಬೆಂಗಳೂರಿನಲ್ಲಿ ಮನೆ ಕೂಡ ಹುಡುಕಲು ಸಿದ್ದತೆ ಮಾಡಿಕೊಂಡಿದ್ದ.ಅಷ್ಟರಲ್ಲಿ ದುಷ್ಕರ್ಮಿಗಳ ಗುಂಪು ಗುರುಸ್ಚಾಮಿ ಮೇಲೆ ಅಟ್ಯಾಕ್ ಮಾಡಿದೆ. ಸದ್ಯ ಬಾಣಸವಾಡಿಯ ಕ್ಯೂರಾ ಆಸ್ಪತ್ರೆಯಲ್ಲಿ ಗುರುಸ್ವಾಮಿಗೆ ಚಿಕಿತ್ಸೆ ನಡೆಯುತ್ತಿದೆ. ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.