ಬೀದರ್ : ಜೆಸ್ಕಾಂ ಸಿಬ್ಬಂದಿ ಮಾಡಿರುವ ತಪ್ಪಿಗೆ ಕುಟುಂಬವೊಂದು ಗೃಹಜ್ಯೋತಿ ಯೋಜನೆಯಿಂದ ವಂಚಿತವಾಗಿರೋ ಘಟನೆ ಬೀದರ್‌ನಲ್ಲಿ ನಡೆದಿದೆ.
ತಾಲೂಕಿನ ಕಂಗಟ್ಟಿ ಗ್ರಾಮದ ಯಲ್ಲಪ್ಪ ಸಾಯಪ್ಪ ಎಂಬುವವರು ಗೃಹಜ್ಯೋತಿ ಅರ್ಜಿ ಹಾಕಲು ಹೋದ ಸಂದರ್ಭದಲ್ಲಿ ಬಾಕಿ ವಿದ್ಯುತ್ ಬಿಲ್ 46,040 ರೂ. ತುಂಬುವಂತೆ ಜೆಸ್ಕಾಂ ಸಿಬ್ಬಂದಿ ಹೇಳಿದ್ದಾರೆ. ಆದರೆ, ಈವರೆಗೆ ವಿದ್ಯುತ್ ಬಿಲ್ ನೀಡಲು ಹಾಗೂ ಕೇಳಲು ಜೆಸ್ಕಾಂ ಸಿಬ್ಬಂದಿ ಯಾರೂ ಬಂದಿಲ್ಲ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
2020ರ ಆಗಸ್ಟ್ ತಿಂಗಳಲ್ಲಿ ಏಕಾಏಕಿ ವಿದ್ಯುತ್ ಬಿಲ್ 31 ಸಾವಿರ ಬಂದಿದ್ದನ್ನ ಪ್ರಶ್ನಿಸಿದ್ದಕ್ಕೆ, ಅಂದಿನಿಂದ ಇಂದಿನವರೆಗೆ ಒಮ್ಮೆಯ ಕರೆಂಟ್ ಬಿಲ್ ನೀಡಿಲ್ಲ. ಆದರೆ, ಗೃಹಜ್ಯೋತಿ ಅರ್ಜಿ ಹಾಕುವ ಸಂದರ್ಭದಲ್ಲಿ ಬಿಲ್ ತುಂಬುವಂತೆ ಒತ್ತಾಯ ಮಾಡ್ತಿದ್ದಾರೆ.
80, 100, 150 ರೂ. ಬರುತ್ತಿತ್ತು
ಮನೆಯಲ್ಲಿ ಮೂರು ಬಲ್ಪ್, ಒಂದು ಪ್ಯಾನ್ ಮಾತ್ರ ಇವೆ. ಹೀಗಿರುವಾಗ ಇಷ್ಟೊಂದು ಬಿಲ್ ಬರಲು ಹೇಗೆ ಸಾಧ್ಯ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ್ರೂ ಕ್ರಮ ಕೈಗೊಂಡಿಲ್ಲ. ಮೊದಲೆಲ್ಲ ಪ್ರತಿ ತಿಂಗಳು 80, 100, 150 ರೂ. ಮಾತ್ರ ಬರುತ್ತಿತ್ತು. ಏಕಾಏಕಿ ಬಿಲ್ ಹೆಚ್ಚಾಗಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಬಿಲ್ ಕೊಡೊದನ್ನೇ ನಿಲ್ಲಿಸಿದ್ದಾರೆ. ಈಗ ಬಾಕಿ 46 ಸಾವಿರ ಹಣ ಹೇಗೆ ತುಂಬೊದು, ಕೂಲಿ ನಾಲಿ ಮಾಡಿ ಜೀವನ ಸಾಗಿಸ್ತಿದ್ದೇವೆ. ನಮಗೆ ಗೃಹಜ್ಯೋತಿ ಯೋಜನೆ ಜಾರಿಯಾಗುವಂತೆ ಮಾಡಿ ಎಂದು ಅಳಲು ತೋಡಿಕೊಂಡಿದ್ದಾರೆ.