ಬೆಂಗಳೂರು : ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದ್ರೆ ಇವ್ರ ಸರ್ಕಾರ ಉಳಿಯಲ್ಲ ಅಂತ ಭಯ ಇದೆ. ಅದಕ್ಕೆ ಆಪರೇಷನ್ ಹಸ್ತ ಶುರು ಮಾಡಿದ್ದಾರೆ ಎಂದು ಮಾಜಿ ಸಚಿವ ಆರ್. ಅಶೋಕ್ ಕುಟುಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ಸರ್ಕಾರದಲ್ಲಿ ಶಾಸಕರ ಕೊರತೆ ಇತ್ತು. ಅವರ ಸರ್ಕಾರದಲ್ಲಿ 136 ಇದ್ದಾರೆ. ಆದ್ರೂ ಯಾಕೆ ಆಪರೇಶನ್ ಮಾಡ್ತಾ ಇದಾರೆ? ಅವ್ರಿಗೆ ಭಯ ಶುರುವಾಗಿದೆ ಎಂದು ಛೇಡಿಸಿದ್ದಾರೆ.
ಶಾಸಕ ಎಸ್.ಟಿ ಸೋಮಶೇಖರ್ ಜೊತೆ ನಾನೇ ಮಾತನಾಡಿದ್ದೇನೆ. ಅವರು ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ. ನಮ್ಮವರು ಪಾರ್ಟಿ ಬಿಟ್ಟು ಹೋಗಲ್ಲ. ಯಾರಿಗೆ ಪಕ್ಷ ನಿಷ್ಠೆ ಇದೆಯೋ ಅವ್ರು ಇರ್ತಾರೆ. ಯಾರಿಗೆ ಪಕ್ಷ ನಿಷ್ಠೆ ಇಲ್ಲ ಅವರು ಹೋಗ್ತಾರೆ. ಸರ್ಕಾರದ ಕೆಲಸ ಅಂದ್ರೆ ಸಭೆ ಮಾಡಬೇಕಾಗುತ್ತದೆ. ಸಚಿವರ ಸಭೆಯಲ್ಲಿ ಶಾಸಕರು ಭಾಗಿಯಾಗ್ತಾರೆ. ಅದಕ್ಕೆ ಆ ಪಕ್ಷ, ಈ ಪಕ್ಷ ಅಂತ ಇಲ್ಲ ಎಂದು ಹೇಳಿದ್ದಾರೆ.
ತಪ್ಪಿದ್ದರೆ ಜೈಲಿಗೆ ಹಾಕಿ
ಬಿಜೆಪಿ ಅವಧಿಯಲ್ಲಿನ ಹಗರಣಗಳ ತನಿಖೆ ವಿಚಾರವಾಗಿ ಮಾತನಾಡಿದ ಅವರು, ತಪ್ಪು ಅಂದ್ರೆ 10,20,30 ಪರ್ಸೆಂಟ್ ಇರಬಹುದು. 40%, 50% ಇರಬಹುದು. ತನಿಖೆ ನೆಪದಲ್ಲಿ ಎಲ್ಲಾ ಅಭಿವೃದ್ಧಿ ಸ್ಟಾಪ್ ಮಾಡಿದ್ದಾರೆ. ನಿಮಗೆ ಗೊತ್ತಿದೆಯಲ್ಲ, ತನಿಖೆಯನ್ನ ಮಾಡಿ. ತಪ್ಪಿದ್ದರೆ ಸ್ಟಾಪ್ ಮಾಡಿ, ಜೈಲಿಗೆ ಹಾಕಿ. ರಾಜ್ಯದಲ್ಲಿರುವ ಎಲ್ಲಾ ಎಂಜಿನಿಯರ್ಸ್ ಕಳ್ಳರು ಅಂದ್ರೆ ಹೇಗೆ? ಕಾಂಗ್ರೆಸ್ ತನಿಖಾಸ್ತ್ರದ ವಿರುದ್ಧ ಗುಡುಗಿದ್ದಾರೆ.