ಬೆಂಗಳೂರು: ತಿಂಗಳಿಗೊಮ್ಮೆ ಸಚಿವರು ಕೆಪಿಸಿಸಿ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮದಡಿ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದ ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್ ಅಹ್ಮದ್ ಕರಾಟೆ ಪಟು ಮನವಿಗೆ ಸ್ಪಂದಿಸಿ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಪಾಲ್ಗೊಳ್ಳಲು ಜಕಾರ್ತಗೆ ಕಳಿಸಲು ಸಹಕಾರಿಯಾಗುವ ಭರವಸೆಯನ್ನು ನೀಡಿದ್ದಾರೆ.
ಹೆಬ್ಬಾಳದ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದು, ಆರ್ಥಿಕ ಸಂಕಷ್ಟದಿಂದ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ಭೇಟಿ ವೇಳೆ ಸಚಿವರೆದುರು ಅಳಲು ತೋಡಿಕೊಂಡರು.ವಿದ್ಯಾರ್ಥಿಯ ಕೋರಿಕೆಗೆ ಸ್ಪಂದಿಸಿದ ಸಚಿವರು ವೈಯಕ್ತಿಕವಾಗಿ 65 ಸಾವಿರ ರೂ. ನೀಡಿ, ಸ್ಪರ್ಧೆಗೆ ಹೋಗಿಬರುವ ವಿಮಾನ ಟಿಕೆಟ್ ಬುಕ್ ಮಾಡಿಸಿಕೊಟ್ಟು ಶುಭ ಹಾರೈಸಿದರು.
ಇದನ್ನೂ ಓದಿ: ಚಂದ್ರಯಾನ ಟೀಕಿಸಿದ ಪ್ರಕಾಶ್ ರೈ ದೇಶ ಬಿಟ್ಟು ಹೋಗಲಿ: ಶೋಭಾ ಕರಂದ್ಲಾಜೆ
ಆರೋಗ್ಯ, ಶಿಕ್ಷಣ ನೆರವು ಕೋರಿ ಬಂದವರಿಗೆ ವೈಯಕ್ತಿಕ ವೆಚ್ಚದಲ್ಲಿ ಆರ್ಥಿಕ ನೆರವು ನೀಡಿದ ಸಚಿವರು, ವಸತಿ ಹಾಗೂ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಹಾಗೂ ವಕ್ಫ್ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿ ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಸೂಕ್ತ ದಾಖಲೆ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಇದೇ ವೇಳೇ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಹವಾಲು ಸಲ್ಲಿಸಿದರು. ಜಿಲ್ಲಾಧ್ಯಕ್ಷ ಶೇಖರ್ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.