Saturday, November 23, 2024

ಈ ಮಂತ್ರಿ ಇರೋದು.. NOC, ಕಳ್ಳ ಬಿಲ್ ಚರ್ಚೆ ಮಾಡೋಕಾ? : ಕುಮಾರಸ್ವಾಮಿ

ಬೆಂಗಳೂರು : ರೈತರಿಗೆ ನೀರು ಬೇಕು ಅಂದ್ರೆ ಸುಪ್ರೀಂ ಕೋರ್ಟ್​ಗೆ ಹೋಗಿ ಅಂತಾರೆ. ಮಂತ್ರಿಗಳು ಹೇಳ್ತಾರೆ. ಇವರು ಯಾಕೆ ಇರೋದು? ಏನ್ ಎನ್ಒಸಿ, ಕಳ್ಳ ಬಿಲ್ ಚರ್ಚೆ ಮಾಡೋಕಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಗುಡುಗಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಣ್ಣ ತಮ್ಮಂದಿರ ಪ್ರಶ್ನೆ ಅಲ್ಲ. ರೈತರ ಹಿತ ಮುಖ್ಯ. ನಾನು ನೀರು ಬಿಡಿ ಅಂತ ಹೇಳಿದ್ನಾ? ನಮ್ಮ ಸಂಕಷ್ಟ ಪರಿಸ್ಥಿತಿ ಮನವರಿಕೆ ಮಾಡಿ ಅಂತ ಹೇಳಿದ್ದೆ. ಕೋರ್ಟ್ ಮುಂದೆ ಈಗ ಸಲಹೆ ಪಡೆದು ಹೋಗ್ತಾವ್ರೆ. ಕೋರ್ಟ್ ಮುಂದೆ ಹೋದ್ರಾ ಅಂತ ಪ್ರಶ್ನೆ ಮಾಡಿದ್ದೆ. ಈಗ ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ದೇವೇಗೌಡ್ರು ಜೊತೆಯಲ್ಲಿ ಪ್ರಧಾನಿ ಭೇಟಿ ಮಾಡಿದ್ದೇನೆ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಮಲತಾಯಿ ಧೋರಣೆ. ತಮಿಳುನಾಡಿನಲ್ಲಿ ರೈತರ ರಕ್ಷಣೆಗೆ ಅವರಲ್ಲಿ ಇರುವ ಗಾಂಭೀರ್ಯ ನಮ್ಮಲ್ಲಿ ಇದ್ಯಾ? ಗಾಂಭೀರ್ಯತೆ ಬೇಕು, ದುಷ್ಪರಿಣಾಮಗಳನ್ನ ಯಾವ ಹಂತದಲ್ಲಿ ಸರಿಪಡಿಸಬೇಕಂತ ವಿವೇಚನೆ ಬೇಕು ಎಂದರು.

ಏನ್ ಮಾಡ್ತಾರೆ ನೋಡೋಣ

ಕೇಂದ್ರ ಸರ್ಕಾರಕ್ಕೆ ನಿಯೋಗ ಕರೆದೊಯ್ಯುವ ವಿಚಾರವಾಗಿ ಮಾತನಾಡಿ, ನಿಯೋಗ ಕರೆದುಕೊಂಡು ಹೋಗಿ ಏನ್ ಮಾಡ್ತಾರೆ. ರಾಜ್ಯದ ಹಿತರಕ್ಷಣೆಗೆ ತಾಂತ್ರಿಕ ಅಧಿಕಾರಿಗಳು ಇದ್ದಾರೆ. ನಿರಾವರಿಯ ಬಗ್ಗೆ ಜ್ಞಾನ ಹೊಂದಿರುವವರು. ಕಾನೂನು ತಜ್ಞರು ಇದ್ದಾರೆ. ಏನ್ ಚರ್ಚೆ ಮಾಡ್ತಾರೆ ನೋಡೋಣ ಎಂದು ಗರಂ ಆದರು.

ರೈತರ ಬದುಕಿನ ಗ್ಯಾರಂಟಿ

ಬರಪೀಡಿತ ಪ್ರದೇಶಗಳ ಘೋಷಣೆಯಾಗದ ವಿಚಾರವಾಗಿ ಮಾತನಾಡಿ, 124 ಕಡೆ ಬರಗಾಲ ಇರುವ ಮಾಹಿತಿ ಪಡೆದಿದ್ದೇವೆ ಅಂತ ಕಂದಾಯ ಸಚಿವರು ಹೇಳಿದ್ದಾರೆ. ಮುಂದಿನ ವಾರದಲ್ಲಿ ಘೊಷಣೆ ಮಾಡ್ತೀವಿ ಅಂತ ಹೇಳಿದ್ದಾರೆ. ಗ್ಯಾರಂಟಿ ಸ್ಕೀಮ್ ಇಟ್ಟುಕೊಂಡು ಪ್ರಚಾರ ಮಾಡಿಕೊಂಡಿದ್ದಾರೆ. ಜೀವದ ಗ್ಯಾರಂಟಿ, ರೈತರ ಬದುಕಿನ ಗ್ಯಾರಂಟಿ ಬಗ್ಗೆ ಹೆಚ್ಚಿನ ಗಮನ ಕೊಡಿ ಎಂದು ನಯವಾಗಿಯೇ ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES