ರಾಮನಗರ : ರಾಮನಗರ ಯಾರಪ್ಪನ ಆಸ್ತಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.
ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ವಿಚಾರವಾಗಿ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಮನಗರವನ್ನ ಯಾರಿಂದಲೂ ಕಬ್ಜ ಮಾಡಲು ಆಗಲ್ಲ ಎಂದು ಹೇಳಿದ್ದಾರೆ.
ಇದು ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷ. ಜಿಲ್ಲೆಗೆ ನಮ್ಮ ಕೊಡುಗೆ ಏನು ಅಂತ ಎಲ್ಲರಿಗೂ ಗೊತ್ತಿದೆ. ಜನ ಒಂದು ತೀರ್ಪು ಕೊಟ್ಟಿದ್ದಾರೆ. ಅದಕ್ಕೆ ನಾವು ತಲೆ ಬಾಗಿದ್ದೇವೆ. ಕುಮಾರಸ್ವಾಮಿ ಕಬ್ಜ, ರಾಮನಗರ ಕಬ್ಜ ಮಾಡೋದು ಸುಲಭ ಅಲ್ಲ. ರಾಮನಗರ ಯಾರಪ್ಪನ ಆಸ್ತಿ ಅಲ್ಲ ಎಂದು ಕುಮಾರಸ್ವಾಮಿ ಘರ್ಜಿಸಿದ್ದಾರೆ.
ಫಸ್ಟ್ ಹೋಗಿ ವಾದ ಮಾಡಬೇಕಿತ್ತು
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿರುದ್ಧ ಹೋರಾಟ ವಿಚಾರವಾಗಿ ಮಾತನಾಡಿ, ರಾಜ್ಯ ಸರ್ಕಾರದ ಲಘುವಾದ ನಿರ್ಧಾರ, ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸರ್ವ ಪಕ್ಷಗಳ ಸಭೆ ಕರೆಯುವಂತೆ ನಾನು ಒತ್ತಾಯ ಮಾಡಿದ್ದೆ. ಇದೀಗ ಸಭೆ ಕರೆಯೋಕೆ ಚರ್ಚೆ ಮಾಡಿದ್ದಾರೆಂತೆ. ತಮಿಳುನಾಡಿನವರು ಸುಪ್ರೀಂ ಕೋರ್ಟ್ ಗೆ ಹೋಗಿ ಅರ್ಜಿ ಹಾಕಿದ ತಕ್ಷಣ ಇವರು ನೀರು ಬಿಟ್ಟಿದ್ದಾರೆ. ಮೊದಲು ಹೋಗಿ ವಾದ ಮಾಡಬೇಕಿತ್ತು ಎಂದಿದ್ದಾರೆ.
ರಾಜ್ಯದ ವಾಸ್ತಸ ಸ್ಥಿತಿಯನ್ನ ತಿಳಿಸುವ ಕೆಲಸ ಮಾಡಬೇಕು. ಆ ಕೆಲಸ ಮಾಡದೇ ಏಕಾಏಕಿ ನೀರು ಬಿಟ್ಟಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಅಂತ ದೊಡ್ಡ ಹೋರಾಟ ಮಾಡಿದ್ರು. ಅದನ್ನ ಎಷ್ಟು ಚೆನ್ನಾಗಿ ಉಳಿಸಿಕೊಳ್ತಿದ್ದಾರೆ ಅಂತ ನೋಡ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.