ಚನ್ನಪಟ್ಟಣ : ಎಂ.ಸಿ. ಅಶ್ವಥ್ ಮತ್ತು ನಾನು ಹಳೇ ಸ್ನೇಹಿತರು. ಹಾಗಾಗಿ, ಹಲವು ಬಾರಿ ಭೇಟಿ ಮಾಡಿದ್ದಾರೆ. ಆದ್ರೆ, ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಕಾಂಗ್ರೆಸ್ ಬಿಟ್ಟವರು ಮರಳಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ನಾನು ಕೂಡಾ ಮಾಧ್ಯಮಗಳಲ್ಲಿ ಈ ಬಗ್ಗೆ ನೋಡಿದ್ದೇನೆ. ಅದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. ಯಾವುದೇ ಷರತ್ತಿಲ್ಲದೇ ಬಂದ್ರೆ ಯಾರನ್ನಾದರೂ ಪಕ್ಷಕ್ಕೆ ಸೇರಿಸಿಕೊಳ್ತೇವೆ. ಅದನ್ನು ಬಿಟ್ಟು ಯಾರನ್ನೂ ಬನ್ನಿ, ಬನ್ನಿ ಅಂತ ಆಹ್ವಾನ ಮಾಡಿಲ್ಲ. ಸ್ವಚ್ಚ ಆಡಳಿತ ಕೊಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡ್ತಿದೆ ಎಂದು ಹೇಳಿದ್ದಾರೆ.
HDKಗೆ ಜನ ರೆಸ್ಟ್ ಕೊಟ್ಟಿದ್ದಾರೆ
I.N.D.I.Aಗೆ ಜೀವದಾನ ಮಾಡಲು ರಾಜ್ಯ ಕಾವೇರಿ ಹಿತ ಬಲಿ ಎಂಬ ಕುಮಾರಸ್ವಾಮಿ ಟ್ವೀಟ್ ವಿಚಾರವಾಗಿ ಮಾತನಾಡಿ, ಅದಕ್ಕೆ ರಾಜ್ಯದ ಜನ ಉತ್ತರ ಕೊಡ್ತಾರೆ. ಕುಮಾರಸ್ವಾಮಿ ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡಲು ಸಮಯವಿಲ್ಲ. ಅವರಿಗೆ ಬಹಳಷ್ಟು ಸಮಯವಿದೆ, ಜನ ರೆಸ್ಟ್ ಕೊಟ್ಟಿದ್ದಾರೆ. ಹಾಗಾಗಿ, ಬೇರೆ ಬೇರೆ ಆಲೋಚನೆಗಳು ಬರ್ತಿವೆ ಎಂದು ಕುಟುಕಿದ್ದಾರೆ.
ಅವ್ರು ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ. ನೀವು ಕೆಲಸ ಮಾಡಿ ಅಂತ ಕಾಂಗ್ರೆಸ್ ಪಕ್ಷಕ್ಕೆ ಜನ ಬೆಂಬಲ ಕೊಟ್ಟಿದ್ದಾರೆ. ರಾಜ್ಯದ ಹಿತ ಕಾಪಾಡಲು ಕುಮಾರಸ್ವಾಮಿ ಸಲಹೆ ಕೊಡಲಿ. ಸಲಹೆ ಸ್ವೀಕರಿಸುತ್ತೇವೆ ಎಂದು ಹೆಚ್ಡಿಕೆಗೆ ನಯವಾಗಿಯೇ ಚಾಟಿ ಬೀಸಿದ್ದಾರೆ.