ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. 2024ರಲ್ಲಿ ಬಿಜೆಪಿ ಮತ್ತೆ ಮಹಾ ವಿಜಯದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗೆ ಗೊತ್ತಿಲ್ಲ, ರಾಜಕಾರಣ ನಿಂತ ನೀರಲ್ಲ. ಯಾರು ಎಲ್ಲಿ ಇರ್ತಾರೆ ಹೇಳಕ್ಕಾಗಲ್ಲ. ಯಾರೇ ಬಂದರೂ.. ಹೋದರು ಬಿಜೆಪಿಯನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆಕಸ್ಮಿಕವಾಗಿ ವಿಧಾನಸಭೆ ಚುನಾವಣೆಯನ್ನು ಸೋತಿದ್ದೇವೆ. ಯಾವ ವ್ಯಕ್ತಿ ಪಕ್ಷದ ನಿಷ್ಠಾವಂತನಾಗಿರುತ್ತಾನೋ ಆತ ಬೇರೆ ಪಕ್ಷಗಳಿಗೆ ಹೋಗುವುದಿಲ್ಲ. ನನ್ನನ್ನು ಯಾರಾದರೂ ಕರಿತಾರಾ ನೋಡೋಣ ಎಂದು ಈಶ್ವರಪ್ಪ ಸವಾಲ್ ಹಾಕಿದರು.
ಸರ್ಕಾರ ಹೋಗುತ್ತೆ, ಬಿಡುತ್ತದೆ
ನನ್ನ ಬಗ್ಗೆ ಯಾರಾದರೂ ಮಾತನಾಡುತ್ತಾರಾ? ಕಾಂಗ್ರೆಸ್ ಪಕ್ಷಕ್ಕೆ ಹೋಗ್ತಾರೆ, ಜೆಡಿಎಸ್ ಪಕ್ಷಕ್ಕೆ ಹೋಗ್ತಾರೆ ಅಂತ ಆ ಧೈರ್ಯವನ್ನು ಯಾರು ಮಾಡುವುದಿಲ್ಲ. ಬಿಜೆಪಿ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಂದ ಗಟ್ಟಿಯಾಗಿದೆ. ಪಕ್ಷಾಂತರ ಮಾಡುವವರಿಂದ ಅಲ್ಲ. ಯಾವ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹೋಗುತ್ತೆ, ಬಿಡುತ್ತದೆ ಅಂತ ಗೊತ್ತಿಲ್ಲ ಎಂದು ಯತ್ನಾಳ್ ಹಾದಿಯನ್ನೇ ತುಳಿದರು.
‘ಕೈ’ ಹುಟ್ಟಿರುವುದೇ ಭ್ರಷ್ಟಾಚಾರದಿಂದ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿ, ಕಾಂಗ್ರೆಸ್ ಹುಟ್ಟಿರುವುದೇ ಭ್ರಷ್ಟಾಚಾರದಿಂದ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಂದ ವೋಟು ಪಡೆದು, ಭ್ರಷ್ಟಾಚಾರದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಂತ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಸೇರಿದಂತೆ ಅನೇಕರು ಭ್ರಷ್ಟಾಚಾರ ನಡೀತಿದೆ ಅಂತ ನೇರವಾಗಿ ಹೇಳಿದ್ದಾರೆ ಎಂದು ಚಾಟಿ ಬೀಸಿದರು.