ಹಾವೇರಿ : ಹಾವೇರಿಯ ಲೋಕಸಭಾ ಚುನಾವಣೆ ಇರಬಹುದು, ಯಾವುದೇ ಚುನಾವಣೆಗೆ ಟಿಕೆಟ್ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಹಾವೇರಿಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ನೀಡಿರುವ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಲಿ ಸಂಸದರಿಗೆ ಟಿಕೆಟ್ ಮುಂದುವರಿಸುವುದು ಬೇಡ ಎಂದು ಪರೋಪಕ್ಷವಾಗಿ ಹೇಳಿದ್ದಾರೆ. ಹತ್ತಕ್ಕೂ ಹೆಚ್ಚು ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಮಿಸ್ಸಾಗಲಿದೆ ಎನ್ನುವ ಚರ್ಚೆ ಬೆನ್ನಲ್ಲೇ ಟಿಕೆಟ್ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಮಗನಿಗೆ ನೆಲೆ ಕಲ್ಪಿಸಲು ಯತ್ನ
ಮಗನಿಗೆ ರಾಜಕೀಯ ನೆಲೆ ಕಲ್ಪಿಸಿಕೊಡಲು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರಯತ್ನ ಪಡುತ್ತಿದ್ದಾರೆ. ಲೋಕಸಭಾ ಸಮರದ ಸಿದ್ದತೆ ಹಿನ್ನೆಲೆ ಈಶ್ವರಪ್ಪ ತಮ್ಮ ಪತ್ನಿ, ಪುತ್ರ ಕೆ. ಈ ಕಾಂತೇಶ್ ಜೊತೆ ಸಿಂಧಗಿ ಮಠಕ್ಕೆ ಭೇಟಿ ನೀಡಿದ್ದಾರೆ. ಸಿಂಧಗಿ ಮಠದಲ್ಲಿ ಶತರುದ್ರಾಭಿಷೇಕ ಹಾಗೂ ರುದ್ರ ಹೋಮ ಹಮ್ಮಿಕೊಂಡಿದ್ದಾರೆ. ಈಶ್ವರಪ್ಪ ಅವರ ಈ ನಡೆ ರಾಜಕೀಯವಾಗಿಯೂ ಬಹಳ ಮಹತ್ವ ಪಡೆದಿದೆ.
ಕೆ.ಎಸ್ ಈಶ್ವರಪ್ಪರ ಪುತ್ರ ಕೆ.ಈ. ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಹಿನ್ನೆಲೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಈ ಬಾರಿ ತಮ್ಮ ಪುತ್ರ ಕೆ.ಈ. ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.