ಬೆಂಗಳೂರು : ರಾಜ್ಯದ ಆನೆಗಳ ಸಂಖ್ಯೆಯಲ್ಲಿ ಸುಮಾರು 350ರಷ್ಟು ಹೆಚ್ಚಳವಾಗಿದ್ದು, ಆನೆಗಳ ಶ್ರೇಣಿ 5,914ರಿಂದ 6,877 ಎಂದು ವಿಶ್ಲೇಷಿಸಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆನೆಗಳ ಗಣತಿಯ ವರದಿ ಬಿಡುಗಡೆ ಮಾಡಿದ ಅವರು, 2017ರಲ್ಲಿ ರಾಜ್ಯದಲ್ಲಿ ಸುಮಾರು 6,049 ಆನೆಗಳಿದ್ದವು, ಈ ಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು, ಸುಮಾರು 350ರಷ್ಟು ಹೆಚ್ಚಳವಾಗಿದೆ ಎಂದರು.
ಆನೆಗಳು ಬಲಿಷ್ಠ ವನ್ಯಜೀವಿಯಾದರೂ ಭಾರತ ಸೇರಿದಂತೆ ವಿಶ್ವಾದ್ಯಂತ ಅಪಾಯದಲ್ಲಿವೆ. ಅವಸಾನದ ಅಂಚಿನಲ್ಲಿರುವ ಆನೆಗಳನ್ನು ಸಂರಕ್ಷಿಸುವ ಸಲುವಾಗಿ, ಆನೆಗಳಿಗೂ ನೆಮ್ಮದಿಯಿಂದ ಬದುಕಲು ಅವುಗಳ ಆವಾಸಸ್ಥಾನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು 2012 ಆಗಸ್ಟ್ 12 ರಿಂದ ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾಡಾನೆ ಲಗ್ಗೆ, ಬೆಳೆ ನಾಶ
ಜಮೀನುಗಳಿಗೆ ಕಾಡಾನೆ ಲಗ್ಗೆಯಿಟ್ಟು ರೈತರ ಬೆಳೆ ನಾಶವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗಡಿ ತಳವಾಡಿ ಚಿಕ್ಕಹೊಳೆ ಆಸುಪಾಸಿನಲ್ಲಿ ನಡೆದಿದೆ. ಪುಂಡಾನೆ ರಾತ್ರಿಯಾದರೆ ಸಾಕು ಜಮೀನುಗಳಿಗೆ ಲಗ್ಗೆ ಹಾಕುತ್ತಿದೆ. ಆನೆಗಳು ಕಬ್ಬು, ಬಾಳೆ ಸೇರಿದಂತೆ ಅನೇಕ ಬೆಳೆಗಳನ್ನು ನಾಶ ಮಾಡಿವೆ. ಆದ್ದರಿಂದ ರೈತರು ರಾತ್ರಿ ವೇಳೆ ಬೆಳೆ ಕಾಯಲು ಕಾದು ಕುಳಿತ್ತಿದ್ದಾರೆ. ಟ್ರಾಕ್ಟರ್ಗಳ ಮೂಲಕ ಆನೆ ಓಡಿಸಲು ಪ್ರಯತ್ನಿಸಿದ್ದಾರೆ.