ಶಿವಮೊಗ್ಗ : ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಲಿಖಿತ ದೂರು ನೀಡಿರುವ ವಿಚಾರವಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಇತಿಹಾಸದಲ್ಲೇ ಮೊದಲ ಪ್ರಕರಣ. ಚಲವರಾಯಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಬೇಕು. ಇದರಲ್ಲಿ ಯಾರ್ಯಾರಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.
ಇನ್ನು ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯ ಶಾಸಕರ ಸಭೆ ಮಾಡಿ ಸಮಾಧಾನ ಪಡಿಸುವ ದುಸ್ಥಿತಿ ಎರಡೇ ತಿಂಗಳಲ್ಲಿ ಬಂದಿದೆ. ಅವರು ಚುನಾವಣೆ ತಯಾರಿ ಮಾಡಿಕೊಳ್ಳಲಿ. ಅವರು ದೆಹಲಿಗೆ ಹೋಗ್ತಾರೋ ಹೋಗಲಿ. ರೈತರ ಸಮಸ್ಯೆ ಮೊದಲು ಬಗೆಹರಿಸಲಿ. ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗುಡುಗಿದ್ದಾರೆ.
ಇದು ರೈತ ವಿರೋಧಿ ಸರ್ಕಾರ
ರೈತರ ಮಕ್ಕಳು ವಿದ್ಯಾವಂತರಾಗಲಿ ಅಂತ ಬಿಜೆಪಿ ಸರ್ಕಾರ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿತ್ತು. ಅದನ್ನು ಇವರು ನಿಲ್ಲಿಸಿದ್ದು, ಪುನಾರಂಭಿಸಬೇಕು. ಜಿಲ್ಲೆಗೊಂದು ಗೋಶಾಲೆ ಜಾರಿಗೆ ತಂದಿತ್ತು. ಅದನ್ನೂ ಈ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಇದು ಗೋಮಾತೆಗೆ ಮಾಡಿದ ಮೋಸ. ವಿದ್ಯುತ್ ಉಚಿತ ಅಂತ ಹೇಳಿ ಡಬಲ್ ತ್ರಿಬಲ್ ಏರಿಕೆ ಮಾಡಿದೆ ಎಂದು ಕಿಡಿಕಾರಿದ್ದಾರೆ.
6 ಸಾವಿರ ಕಂಟಿನ್ಯೂ ಮಾಡ್ಬೇಕು
ಕಿಸಾನ್ ಸಮ್ಮಾನ ಯೋಜನೆ ಮುಂದುವರಿಸಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೆಚ್ಚುವರಿಯಾಗಿ ನೀಡುತ್ತಿದ್ದ 6000 ರೂ. ಮುಂದುವರಿಸಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ. ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ. ಬಿಜೆಪಿ ಸರ್ಕಾರ ತಂದ ಒಳ್ಳೆಯ ಯೋಜನೆಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.