ರಾಮನಗರ : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಇಬ್ಬರಿಗೆ ಗಂಭೀರ ಗಾಯವಾಗಿದೆ.
ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣದ ಗ್ರಾಮದ ಬಳಿ ಈ ಘಟನೆ ನಡೆದಿದೆ. ಓವರ್ ಟೇಕ್ ಮಾಡಲು ಹೋಗಿ ಚಲಿಸುತ್ತಿದ್ದ ಕಂಟೈನರ್ಗೆ ಇನ್ನೋವಾ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಬೆಂಗಳೂರಿನಿಂದ ಮೈಸೂರು ಕಡೆಗೆ ಕಂಟೈನರ್ ಹೋಗುತ್ತಿತ್ತು. ಈ ವೇಳೆ ಹಿಂಬದಿಯಿಂದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನ ಚಾಲಕ ಮತ್ತು ವೃದ್ದೆಯೊಬ್ಬರಿಗೆ ತೀವ್ರ ಗಾಯವಾಗಿದ್ದು, ಕಾರಿನಲ್ಲಿದ್ದ ಮಗು ಸೇರಿದಂತೆ ಇತರೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ಬಳಿಕ ಚನ್ನಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಡಿಜಿಪಿ NH ಪರಿಶೀಲನೆ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಚಾರ ಮತ್ತು ಸುರಕ್ಷತಾ ಪ್ರಾಧಿಕಾರ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ಮಾಡಿದ್ದಾರೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪರಿಶೀಲನೆ ನಡೆಸಿದ್ದಾರೆ. ತುಮಕೂರಿನ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪರಿಶೀಲಿಸಿದ್ದಾರೆ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಹಳ್ಳಿಯಿಂದ ಶಿರಾವರೆಗೆ ಪರಿಶೀಲನೆ ನಡೆಸಿದ್ದಾರೆ.