ಬೆಂಗಳೂರು : 500 ಇಲ್ಲ ಅಂದ್ರೆ 1000 ವರ್ಗಾವಣೆ ಮಾಡಿಕೊಳ್ಳಲಿ, ನನಗೆ ಯಾವ ಹತಾಷೆಯೂ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿರುಗೇಟು ಕೊಟ್ಟರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದೇನು ಅಭ್ಯಂತರವಿಲ್ಲ. ಆದ್ರೆ, ವರ್ಗಾವಣೆ ಮಾಡಬೇಕಾದ್ರೆ ಒಂದು ನಿಯಮ ಇದೆ. ನಾನೇನು ಖರ್ಗೆಯವರು ದುಡ್ಡು ಹೊಡೆದಿದ್ದಾರೆ ಅಂತ ಕೇಳ್ತಾ ಇಲ್ಲ ಎಂದು ಕುಟುಕಿದರು.
ಇಲ್ಲಿ ಸ್ಥಳೀಯವಾಗಿ ಏನು ನಡೆದಿದೆ. ಮಧ್ಯವರ್ತಿಗಳು ಏನು ಮಾಡ್ತಾ ಇದ್ದಾರೆ ಅನ್ನೋದ್ರ ಬಗ್ಗೆ ಹೇಳಿದ್ದೇನೆ. 500 ಇಲ್ಲ ಅಂದ್ರೆ, 1000 ಮಾಡಿಕೊಳ್ಳಲಿ ಸರ್ಕಾರ ಇದೆ. ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ವರ್ಗಾವಣೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ವರ್ಗಾವಣೆಯ ಬಗ್ಗೆ ನಮ್ಮಲ್ಲೇ ಹೇಳ್ತಾ ಇದ್ದಾರೆ. ಪ್ರಿಯಾಂಕ್ ಖರ್ಗೆ ತಗೊಂಡಿದ್ದಾರೆ ಅಂತಾ ನಾನು ಎಲ್ಲೂ ಹೇಳಿಲ್ಲ ಎಂದು ಚಾಟಿ ಬೀಸಿದರು.
ಇದನ್ನೂ ಓದಿ : ಇದೇನು ಪ್ರಜಾಪ್ರಭುತ್ವವೋ? ಸಿದ್ದರಾಮಯ್ಯರ ತುಘಲಕ್ ದರ್ಬಾರೋ? : ಬಿಜೆಪಿ ಕಿಡಿ
ಅವ್ರ ಹೆಸ್ರು ಹೇಳಿ ಈಸ್ಕೋತಿದಾರೆ
ನಾನು ಹೇಳಿರೋದು ಇಲ್ಲಿ ಕೆಲವರು ಮಧ್ಯವರ್ತಿಗಳು. ಅವರ ಹೆಸರನ್ನು ಹೇಳಿ ಈಸ್ಕೋತಾ ಇದ್ದಾರೆ ಅಂತ ಹೇಳಿದ್ದೀನಿ. ನಾನು ಅದರ ಬಗ್ಗೆ ರಿಯಾಕ್ಟ್ ಮಾಡೋದಿಲ್ಲ. ಜನ ಅಧಿಕಾರ ಕೊಟ್ಟಿದ್ದಾರೆ ಮಾಡ್ತಿದ್ದಾರೆ. ಅವರು ಬೆಂಗಳೂರಿಗಾದ್ರೂ ಮಾಡಿಕೊಳ್ಳಲಿ, ಬೆಳಗಾಂಗಾದ್ರೂ ಮಾಡಿಕೊಳ್ಳಲಿ. ಗುಲಬರ್ಗಾಕ್ಕಾದ್ರೂ ಮಾಡಿಕೊಳ್ಳಲಿ ಎಂದು ಹೇಳಿದರು.
ಪಿಡಿಓಗಳ ವರ್ಗಾವಣೆ ದಂಧೆ ನಡೆಯುತ್ತಿದೆ
ನಾನು ಹೇಳಿರೋದು ಮಧ್ಯವರ್ತಿಗಳು ಅಂತ. ಅದನ್ನು ಸಮರ್ಥನೆ ಮಾಡಿಕೊಳ್ತೇನೆ ಅಂದ್ರೆ ಮಾಡಿಕೊಳ್ಳಲಿ, ನಾನೇನು ಮಾಡೋದಕ್ಕೆ ಆಗುತ್ತೆ. ನನ್ನ ಕ್ಷೇತ್ರಕ್ಕೆ ಯಾರನ್ನು ಬೇಕಾದ್ರು ಹಾಕಿಕೊಳ್ಳಲಿ. ಸರ್ಕಾರ ಅವರದ್ದಿದೆ, ಅವರಿಗೆ ಯಾರು ಬೇಕೋ ಆ ಅಧಿಕಾರಿಗಳನ್ನು ಹಾಕಿಕೊಳ್ಳಲಿ. ಇತ್ತೀಚೆಗೆ ಪಿಡಿಓಗಳ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ರೇವಣ್ಣ ಆರೋಪ ಮಾಡಿದರು.