ಚಿಕ್ಕೋಡಿ : ಕಳೆದ 15 ದಿನಗಳಿಂದ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೊಲ್ಲಾಪುರ ಜಿಲ್ಲೆಯಲ್ಲಿರುವ ರಾಧಾನಗರಿ ಡ್ಯಾಂ ಭರ್ತಿಯಾಗಿದೆ. ರಾಧಾನಗರಿ ಡ್ಯಾಂ ಭರ್ತಿಯಾದ ಹಿನ್ನೆಲೆ, ಎಲ್ಲಾ ಗೇಟ್ಗಳಿಂದ ನೀರು ಬಿಡುಗಡೆ ಮಾಡಲಾಗಿದೆ. ಆ ದೃಶ್ಯ ಮನಮೋಹಕವಾಗಿದ್ದು, ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಪಾರ ಪ್ರಮಾಣದ ನೀರು ಹರಿಯುತ್ತಿರೋ ಹಿನ್ನೆಲೆಯಲ್ಲಿ ಭೋಗಾವತಿ ನದಿ ತುಂಬಿ ಹರಿಯುತ್ತಿದೆ. ರಾಧಾನಗರಿ ಡ್ಯಾಂನಿಂದ ಸುಮಾರು 7 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ದು, ಕೊಲ್ಲಾಪುರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಭೋರ್ಗರೆಯುತ್ತಿದೆ ಘಟಪ್ರಭಾ ತೀರ
ಮಹಾರಾಷ್ಟ್ರದ ಗಡಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರೋ ಮಳೆ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಮಾರ್ಕಂಡೇಯ ಮತ್ತು ಹಿರಣ್ಯಕೇಶಿಯಿಂದ ಘಟಪ್ರಭಾ ನದಿಗೆ ನೀರು ಹರಿದು ಬರುತ್ತಿದೆ.
ಸದ್ಯ ಘಟಪ್ರಭಾ ನದಿಗೆ 18 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಮಿರ್ಜಿ ಸೇರಿದಂತೆ ಕೆಲವೆಡೆ ಬ್ಯಾರೇಜ್ ರಸ್ತೆಗೆ ಸಮನಾಗಿ ಘಟಪ್ರಭಾ ನದಿ ನೀರು ಹರಿಯುತ್ತಿದೆ. ಈಗಾಗಲೇ ನದಿ ಪಾತ್ರದ ಗ್ರಾಮಗಳಿಗೆ ಮುಧೋಳ ತಾಲೂಕಾಡಳಿತ ಕಟ್ಟೆಚ್ಚರ ವಹಿಸಲು ಸೂಚಿಸಿದೆ.