ಬೆಂಗಳೂರು : ನಾನು ದಲಿತ ಶಾಸಕ, ನನಗೆ ರಕ್ಷಣೆ ಕೊಡಲಿಲ್ಲ. ಅಂದು ನನ್ನ ವಿರುದ್ಧ ಪಿತೂರಿ ಮಾಡಿದ್ರು ಎಂದು ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬೇಸರಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ತನ್ವಿರ್ ಸೇಠ್ ಅವರಿಗೂ ಈ ಪ್ರಕರಣಕ್ಕೂ ಸಂಬಂಧವೇನು? ಎಂದು ಪ್ರಶ್ನೆ ಮಾಡಿದರು.
ಅಮಾಯಕರನ್ನ ಈಗಾಗಲೇ ಪೊಲೀಸರು ಬಿಟ್ಟಿದ್ದಾರೆ. ಈಗ ತಪ್ಪಿತಸ್ಥರು ಅಂತ ಹೇಳಿಸುವುದರ ಹಿಂದೆ ಹುನ್ನಾರ ಇದೆ. ನನ್ನನ್ನ ಸೋಲಿಸಲು ಕಾರಣರಾದವರನ್ನು ಬಿಡುಗಡೆಗೆ ಮುಂದಾಗಿದ್ದಾರೆ. ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಬಿಡುಗಡೆ ಮಾಡಿಸಲು ಈ ಪ್ಲ್ಯಾನ್ ಮಾಡಿರಬಹುದು ಎಂದು ಆರೋಪಿಸಿದರು.
ಇದನ್ನೂ ಓದಿ : ಸಿಎಂಗೂ ಇಂಥ ಕೇಸ್ಗಳ ವಾಪಸಾತಿಗೆ ಪತ್ರ ಬರೆದಿದ್ದಾರೆ : ಬಸವರಾಜ ಬೊಮ್ಮಾಯಿ
ನ್ಯಾಯಾಲಯದ ತೀರ್ಪು ಬರಲಿ
ನಾನು ಸರ್ಕಾರಕ್ಕೆ ಮನವಿ ಮಾಡ್ತೀನಿ. ದಾಖಲೆ, ಟಿಪಿ, ಫೋಟೋಸ್ ನೋಡಿ ಆರೋಪಿಗಳನ್ನು ಹಿಡಿದಿದ್ದಾರೆ. ಎನ್ಐಎ ಪ್ರಕರಣವನ್ನು ದಾಖಲಿಸಿಕೊಂಡು ಫೋಟೋಸ್ ನೋಡಿ ಎಫ್ಐಆರ್ ದಾಖಲು ಮಾಡಿದ್ದಾರೆ. ನ್ಯಾಯಾಲಯದ ತೀರ್ಪು ಬರಲಿ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು.
ಕೋರ್ಟ್ ನಲ್ಲಿ ಹೋರಾಟ ಮಾಡ್ತೀನಿ
ತನ್ವಿರ್ ಸೇಠ್ ಪತ್ರದ ಹಿಂದೆ ಹಿರಿಯ ನಾಯಕರು ಇದ್ದಾರೆ. ನಾನು 2018ರಲ್ಲಿ ಅತಿಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೆ . ಸಿಎಂ ಹಾಗೂ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಸರ್ಕಾರದ ಈ ನಡೆ ವಿರುದ್ಧ ಕೋರ್ಟ್ ನಲ್ಲಿ ಹೋರಾಟ ಮಾಡ್ತೀನಿ. ಆರೋಪಿಗಳನ್ನು ಬಿಡುಗಡೆ ಮಾಡುವ ಹುನ್ನಾರ ಸರ್ಕಾರದಿಂದ ನಡೆಯುತ್ತಿದೆ ಎಂಬ ಅನುಮಾನವಿದೆ ಎಂದು ದೂರಿದರು.