ವಿಜಯಪುರ : ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬೇಡಿ ಎಂಬ ಸ್ವಾಮೀಜಿಗಳ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ಎಸ್.ಎಂ ಪಾಟೀಲ್ ಗಣಿಹಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರಾದರೂ ಸ್ವಾಮೀಜಿಗಳು ಗೋವು ಸಾಕಿದ್ದೀರಾ? ಸೆಗಣಿ, ಉಚ್ಚಿ (ಮೂತ್ರ) ತೆಗೆದಿದ್ದಾರಾ? ಅಂತ ಪ್ರಶ್ನಿಸುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
20 ಸ್ವಾಮೀಜಿಗಳು, ವಿಎಚ್ಪಿ ಹಾಗೂ ಆರ್ಎಸ್ಎಸ್ನವರನ್ನು ಅಕ್ಕಪಕ್ಕ ಕೂರಿಸಿಕೊಂಡು ಸಭೆ ಮಾಡಿದ್ರು. ಆರ್ಎಸ್ಎಸ್, ಬಿಜೆಪಿ ಪುಂಗಿ ಬಾರಿಸಲಿಕ್ಕೆ ಸ್ವಾಮೀಜಿಗಳು ಕುಳಿತುಕೊಂಡಿದ್ದಾರೆ. ಭಾರತ ದೇಶದಲ್ಲಿ ಖಾವಿ ತೊಟ್ಟವರ ಬಗ್ಗೆ ಇರುವ ಪವಿತ್ರ ಭಾವನೆ ಯಾರಿಗೂ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ಯಾರ ಹೊಟ್ಟೆ ತುಂಬಿಸಲು ಗೋವುಗಳನ್ನು ಕಡಿಯಲು ಪ್ರೇರಣೆ ನೀಡ್ತಿದ್ದೀರಿ? : ಪ್ರಭು ಚೌಹಾಣ್ ಪ್ರಶ್ನೆ
ಸ್ವಾಮೀಜಿಗಳು ರಾಜಕಾರಣ ಮಾಡ್ತಿದ್ದಾರೆ
ಖಾವಿ ತೊಟ್ಟುಕೊಂಡು ಸ್ವಾಮೀಜಿಗಳು ರಾಜಕಾರಣ ಮಾಡುತ್ತಿದ್ದಾರೆ. ಇದನ್ನ ಅರ್ಥ ಮಾಡಿಕೊಳ್ಳಬೇಕು. ಅರಿಷಡ್ವರ್ಗಗಳ ನಾಶ ಮಾಡಿದಾಗ ಖಾವಿ ಬರುತ್ತೆ. ಅದನ್ನು ಹಾಕಿಕೊಳ್ಳಲು ಶಕ್ತಿ ಬರುತ್ತೆ. ಎಲ್ಲಾ ಕಲ್ಮಶ, ವಿಷದ ಭಾವನೆ ಇಟ್ಟುಕೊಂಡು ನೀವು ಸನ್ಯಾಸಿ ಆಗ್ತೀರಾ ಎಂದು ಗಣಿಹಾರ ಸ್ವಾಮೀಜಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಬಂದ ಬಳಿಕ ಗೋಹತ್ಯೆ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿಕೆ ಹರಿಬಿಟ್ಟಿದ್ದರು. ಪಶುಸಂಗೋಪನಾ ಸಚಿವ ವೆಂಕಟೇಶ್ ಅವರು, ಕೋಣ ಕಡಿದು ಹಾಕುವುದಾದರೆ ಹಸು ಏಕೆ ಕಡಿಯಬಾರದು ಎಂದಿದ್ದರು. ಇದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದರು.