ಉತ್ತರ ಕನ್ನಡ : ದೂಧ್ ಸಾಗರ್‌ಗೆ ಟ್ರೆಕ್ಕಿಂಗ್ ತೆರಳಿದ ಯುವಕರಿಗೆ ರೈಲ್ವೆ ಪೊಲೀಸರು ಹಾಗೂ ಗೋವಾ ಪೊಲೀಸರು ಬಸ್ಕಿ ಹೊಡೆಸಿದ್ದಾರೆ.
ಗೋವಾ ಸರ್ಕಾರ ಇಂದು ದೂಧ್ಸಾಗರ್ ಜಲಪಾತ ವೀಕ್ಷಣೆ ಹಾಗೂ ಆ ಭಾಗದಲ್ಲಿ ಟ್ರೆಕಿಂಗ್ಗೆ ನಿಷೇಧ ವಿಧಿಸಿ ಆದೇಶ ಹೊರಡಿಸಿದೆ. ಹೀಗಾಗಿ ದೂಧ್ಸಾಗರ್ ವೀಕ್ಷಣೆಗೆಂದು ಬೆಳಗಾವಿ, ಬಾಗಲಕೋಟೆ ಹಾಗೂ ರಾಜ್ಯದ ವಿವಿಧೆಡೆಯಿಂದ ತೆರಳಿದ್ದ ಸಾವಿರಾರು ಯುವಕರಿಗೆ ಬಸ್ಕಿ ಶಿಕ್ಷೆ ವಿಧಿಸಲಾಗಿದೆ.
ಪ್ರವಾಸಕ್ಕೆ ಬಂದ ಯುವಕರನ್ನು ಪೊಲೀಸರು ಅರ್ಧದಲ್ಲೇ ತಡೆದಿದ್ದಾರೆ. ಅವರಿಗೆ ಬಸ್ಕಿ ಹೊಡೆಸಿ ವಾಪಸ್ ಕಳುಹಿಸಿದ್ದಾರೆ. ರೈಲ್ವೆ ಟ್ರ್ಯಾಕ್ ಬಳಿಯೇ ನಿಲ್ಲಿಸಿ ಲಾಠಿ ಹಿಡಿದು ಗೋವಾ ಪೊಲೀಸರು ಯುವಕರಿಗೆ ಬಸ್ಕಿ ಹೊಡೆಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ‘ವಿಶ್ವ ಕುಂದಾಪುರ’ ಕನ್ನಡ ಹಬ್ಬದ ಸಂಭ್ರಮ
50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ರೈಲ್ವೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಗೋವಾ ಸರ್ಕಾರದಿಂದ ಅನುಮತಿ ನೀಡಿದಲ್ಲಿ ಮಾತ್ರ ದೂಧ್ಸಾಗರ್ಗೆ ಟ್ರೆಕ್ಕಿಂಗ್ ತೆರಳಲು ಅನುಮತಿ ನೀಡಲಾಗುತ್ತದೆ.
ಸಾವಿರಕ್ಕೂ ಹೆಚ್ಚು ಜನರ ಆಗಮನ
ವೀಕೆಂಡ್ ಹಿನ್ನೆಲೆ ದೂಧ್ಸಾಗರ್ ಜಲಪಾತ ನೋಡಲು ಸಾವಿರಾರು ಜನ ಆಗಮಿಸಿದ್ದರು. ದೂಧ್ಸಾಗರ ನೋಡಲು ರೈಲ್ವೆ ಟ್ರ್ಯಾಕ್ ಮೇಲೆ ನಡೆದು ಹೋಗುವುದನ್ನು ನಿಷೇಧಿಸಲಾಗಿದೆ. ಆದರೂ, ಹಲವರು ಆಗಮಿಸುತ್ತಿದ್ದರು. ಒಂದೇ ಬಾರಿ ಸಾವಿರಕ್ಕೂ ಹೆಚ್ಚು ಜನ ಬಂದಿದ್ದರಿಂದ ರೈಲ್ವೆ ಪೊಲೀಸರು, ಗೋವಾ ಪೊಲೀಸರು ತಡೆದಿದ್ದಾರೆ.