ಬೆಂಗಳೂರು : ನಾನು ಸಂಪಾದನೆ ಮಾಡಿರೋ ಹೆಸರಾಗಲಿ, ಸ್ಟಾರ್ ಗಿರಿ ಆಗಲಿ ಯಾರಿಂದಲೂ ಅಳಿಸೋಕೆ ಆಗಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಖ್ಯಾತಿ ಅಳಿಸಲು ಸಾಧ್ಯ ಆಗುತ್ತೆ ಅಂದ್ರೆ ನಾನು ಏನೂ ಮಾಡಿಲ್ಲ ಅಂತ ಅರ್ಥ. ನಮ್ಮ ಒಳ್ಳೆತನ ದುರ್ಬಳಕೆ ಮಾಡಿಕೊಂಡ್ರೆ ಸುಮ್ಮನಿರಲ್ಲ ಎಂದರು.
ನಮ್ಮ ಫಿಲ್ಮ್ ಇಂಡಸ್ಟ್ರಿ, ನಮ್ಮ ತಾಯಿ ಸಮಾನ. ಎಲ್ಲರೂ ಎಲ್ಲೇ ಕುಳಿತು ಪರ ವಿರೋಧ ಮಾಡಿದಾಗ ಕಾನೂನು ಮೂಲಕವೇ ಹೋಗಬೇಕಾಗುತ್ತೆ. ನಾನು ಸುಮ್ಮನೆ ಇಲ್ಲಿಗೆ ಬಂದಿಲ್ಲ. ಕಷ್ಟ ಪಟ್ಟು ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ಯಾರು ಏನೇ ಮಾಡಲಿ, ನನಗೆ ಸಹನೆ ತುಂಬಾ ಇದೆ. ಆದರೆ, ಉತ್ತರ ಕೊಡ್ಬೇಕಾಗುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ : ‘ವೀರ ಸಿಂಧೂರ ಲಕ್ಷ್ಮಣ’ ಕನ್ಫರ್ಮ್ : ದರ್ಶನ್-ಉಮಾಪತಿ ಕಾಂಬೋನಲ್ಲಿ 2024ಕ್ಕೆ ಶೂಟಿಂಗ್ ಶುರು?
ದೇವ್ರು ಒಳ್ಳೆದು ಮಾಡ್ಲಿ
ಯಾರೇ ಏನೆ ಆರೋಪ ಮಾಡಿದ್ರು ಕೋರ್ಟ್ ನಿಂದ ಸರಿ ಉತ್ತರ ಸಿಗುತ್ತೆ. ಒಂದು ವಿಚಾರ ಹೇಳೋಕೆ ಇಷ್ಟಪಡ್ತೀನಿ, ದೇವ್ರು ಒಳ್ಳೆದು ಮಾಡ್ಲಿ. ಒಂದಂತು ಸತ್ಯ, ಯಾವುದೇ ಸುಳ್ಳಿರಲಿ, ಸತ್ಯ ಇರಲಿ ಬಹಿರಂಗವಾಗಿ ಹೊರಗೆ ಬರಲೇಬೇಕು. ಸರಿಯಾದ ಮಾರ್ಗದಲ್ಲಿ ಹೋಗ್ತಿದ್ದೀನಿ ಅಂತ ನಾನು ಅಂದ್ಕೊಂಡಿದೀನಿ. ಕೋರ್ಟ್ ಗೆ ಹೋದ್ರೆ ಎಲ್ಲಾ ಸರಿ ಹೋಗುತ್ತೆ ಎಂದು ಹೇಳಿದರು.
ಆರೋಪಕ್ಕೆ ನಾನು ಉತ್ತರ ಕೊಡಲ್ಲ
ನಾನು ಕಲಾವಿದ ಆದ್ಮೇಲೆ ಎಲ್ಲರಿಗೂ ಸಹಾಯ ಮಾಡ್ತೀನಿ ಅಂತ ಚಾರಿಟಬಲ್ ಟ್ರಸ್ಟ್ ಓಪನ್ ಮಾಡಿಲ್ಲ. ಮಾಧ್ಯಮವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಬಾಯಿ ಇದೆ ಅಂತ ಹೆಂಗ್ ಬೇಕು ಹಂಗೆ ಮಾತನಾಡಬಾರದು. ನಾನು ಸರಿಯಾಗೆ ನಡೆದುಕೊಂಡು ಬಂದಿದೀನಿ. ಎಲ್ಲರ ಆರೋಪಕ್ಕೆ ನಾನು ಉತ್ತರ ಕೊಡಲ್ಲ. ಎಲ್ಲಿ ಇತ್ಯರ್ಥ ಆಗ್ಬೇಕು ಅಲ್ಲಿ ಇತ್ಯರ್ಥ ಆಗುತ್ತೆ. ಅದಕ್ಕೆ ನಾನು ಕೋರ್ಟ್ ನಲ್ಲಿ ಬಂದೆ ಎಂದು ತಿಳಿಸಿದರು.