ಬೆಂಗಳೂರು : ಟಿ.ಬಿ ಜಯಚಂದ್ರ ಮೊದಲು ಚುನಾವಣೆ ಹೇಗೆ ನಡೆಸಿದರು, ಈ ಬಾರಿ ಚುನಾವಣೆ ಹೇಗೆ ಮಾಡಿದ್ದಾರೆ ಅಂತ ನನಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.
ವಿಧಾನಸಭೆ ಕಲಾಪದಲ್ಲಿ ಶಾಸಕ ಬಿ.ಆರ್.ಪಾಟೀಲ್ ಇಂದಿನ ರಾಜಕೀಯ ಸ್ಥಿತಿಗತಿ ಬಗ್ಗೆ ಮಾತನಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಹೆಚ್.ಡಿ ಕುಮಾರಸ್ವಾಮಿ, ನಗುತ್ತಿದ್ದ ಜಯಚಂದ್ರಗೆ ಕೌಂಟರ್ ಕೊಟ್ಟರು.
ಶಾಸಕರಾದ ಮೇಲೆ ಶಾಸಕಗಿರಿ ಉಳಿಸಿಕೊಳ್ಳಲು ಮುಂದಾಗುತ್ತಾರೆ. ನಾವು 5, 10 ಸಾವಿರ ಕೊಟ್ಟರೆ ಹೋಗಿ ಚುನಾವಣೆ ಮಾಡುತ್ತಿದ್ದರು. ಈಗ ಆ ರೀತಿ ಪರಿಸ್ಥಿತಿ ಇಲ್ಲ. ಈ ಬಾರಿ ಚುನಾವಣೆ ಹೇಗೆ ನಡೆಯಿತು ಅಂತ ನನಗೆ ಗೊತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಬಂದ್ಮೇಲೆ ಜಿಹಾದಿ ಮನಃಸ್ಥಿತಿ ಇರೋರು ಎದ್ದು ಕೂತಿದ್ದಾರೆ : ಶ್ರೀರಾಮುಲು ಗುಡುಗು
ಚುನಾವಣೆಗೂ ಮೊದಲೇ ಕುಕ್ಕರ್
ಚುನಾವಣೆ ಘೋಷಣೆಗೂ ಮೊದಲೇ ಕುಕ್ಕರ್ ಎಲ್ಲಾ ಹಂಚಿದರು. ಇಲ್ಲೇ ಶಾಸಕ ಟಿ.ಬಿ ಜಯಚಂದ್ರ ಇದ್ದಾರೆ. ನಗುತ್ತಾ ಇದ್ದಾರೆ. ಟಿ.ಬಿ ಜಯಚಂದ್ರ ಮೊದಲು ಚುನಾವಣೆ ಹೇಗೆ ನಡೆಸಿದರು? ಈ ಬಾರಿ ಚುನಾವಣೆ ಹೇಗೆ ಮಾಡಿದ್ದಾರೆ ಅಂತ ನನಗೆ ಗೊತ್ತಿದೆ ಎಂದು ಪಂಚ್ ಕೊಟ್ಟರು.
ಚುನಾವಣೆ ವೇಳೆ ಜನ ಮೂರು ಪಕ್ಷಗಳಿಂದ ದುಡ್ಡು ಪಡೆಯುತ್ತಾರೆ. ಯಾರಿಗೆ ವೋಟು ಹಾಕಿದ್ದಾರೆ ಅಂತ ಡಬ್ಬ ಒಡೆದಾಗಲೇ ಗೊತ್ತಾಗೋದು. ಬಿ.ಆರ್ ಪಾಟೀಲ್ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸಭಾಧ್ಯಕ್ಷರೇ, ಇದು ಯಾರಿಗೆ ಬೇಕಾಗಿದೆ. ದುಡ್ಡು ಮಾಡೋದು ಹೇಗೆ ಅನ್ನೋದರ ಬಗ್ಗೆ ಎಲ್ಲರ ಗಮನ ಇದೆ ಎಂದು ಬೇಸರಿಸಿದರು.