ವಿಜಯಪುರ : ಕುಡಿತದ ಚಟವನ್ನು ಬಿಡದ ಹಿನ್ನಲೆ ತಂದೆಯೇ ಮಗನನ್ನು ಹತ್ಯೆಗೈದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುತ್ತಪ್ಪ ಮಸಳಿ (38) ಹತ್ಯೆಯಾಗಿರುವ ವ್ಯಕ್ತಿ. ಬಸಪ್ಪ ಮಸಳಿ ಎಂಬಾತನೇ ಸ್ವಂತ ಮಗನನ್ನು ಹತ್ಯೆಗೈದಿರುವ ಆರೋಪಿ ತಂದೆ.
ಬಸಪ್ಪ ಮಸಳಿ ಮೂಲತಃ ಕೃಷಿಕ. ತಾನು ಕಷ್ಟಪಟ್ಟು ದುಡಿಯುತ್ತಿದ್ದೇನೆ ನೀನು ದುಷ್ಚಟಕ್ಕೆ ಬಲಿಯಾಗಬೇಡ ಎಂದು ಮಗನಿಗೆ ಬುದ್ದಿಮಾತು ಹೇಳಿದ್ದರು. ಆದರೆ, ತಂದೆಯ ಮಾತನ್ನೇ ನಿರ್ಲಕ್ಷಿಸಿ ಕುಡಿತದ ಚಟಕ್ಕೆ ಬಿದ್ದಿದ್ದನು. ಇದಲ್ಲದೆ, ಜಮೀನಿನಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಮದ್ಯ ಸೇವೆ ಮಾಡುತ್ತಿದ್ದನು.
ಇದನ್ನು ಓದಿ: ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ಯಾವ ಕಾರಣಕ್ಕೆ ಕೊಡಬೇಕು? : ಹೆಚ್.ಕೆ ಪಾಟೀಲ್
ಎಣ್ಣೆ ಏಟಲ್ಲಿ ನಿತ್ಯ ರಂಪಾಟ
ನಿತ್ಯ ಮದ್ಯಪಾನದ ನಶೆಯಲ್ಲಿಯೇ ಮನೆಗೆ ಬರುತ್ತಿದ್ದನು. ಕೃಷಿ ಚಟುವಟಿಕೆಗಳಲ್ಲಿ ತಂದೆಗೆ ನೆರವಾಗಬೇಕಿದ್ದ ಮಗ ತಪ್ಪು ದಾರಿ ಹಿಡಿದಿದ್ದರಿಂದ ತಂದೆ ಬಸಪ್ಪ ಮಸಳಿ ಕುಪಿತರಾಗಿದ್ದರು. ದುಷ್ಟರ ಸಂಗ ಬಿಟ್ಟುಬಿಡು, ಮಧ್ಯಪಾನ ಮಾಡಬೇಡ ಎಂದು ಸಾಕಷ್ಟು ಬಾರಿ ಮಗನ ಮುಂದೆ ಗೋಗರೆದಿದ್ದರು. ಆದರೆ ತಂದೆಯ ಮಾತನ್ನು ಲೆಕ್ಕಿಸದೆ ಮನೆಯಲ್ಲಿದ್ದ ವಸ್ತುಗಳನ್ನೂ ಮಾರಿ ನಿತ್ಯ ಕುಡಿದು ರಂಪಾಟ ಮಾಡುತ್ತಿದ್ದನು.
ಸಲಾಕೆಯಿಂದ ಹೊಡೆದು ಹತ್ಯೆ
ಊರಿನ ಜನರ ಮುಂದೆ ತನ್ನನ್ನು ತಲೆ ತೆಗ್ಗಿಸುವಂತೆ ಮಾಡುತ್ತಿದ್ದಾನೆ ಎಂದು ಮನನೊಂದಿದ್ದರು. ನಿನ್ನೆಯೂ ಇದೆ ಪ್ರಸಂಗ ಪುನರಾವರ್ತನೆಯಾಗಿತ್ತು. ಇದರಿಂದ ಆಕ್ರೋಶಕ್ಕೆ ಒಳಗಾಗಿ ಹೊಲದಲ್ಲಿದ್ದ ಸಲಾಕೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಈ ಸಂಬಂಧ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.