ಮಂಗಳೂರು : ಚಿಕ್ಕೋಡಿಯಲ್ಲಿ ಜೈನ ಮುನಿಗಳ ಭೀಕರ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ಕೃತ್ಯವನ್ನು ಖಂಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ.
ದಿಗಂಬರ ಮುನಿಗಳ ಈ ರೀತಿಯ ಹತ್ಯೆ ಇತಿಹಾಸದಲ್ಲಿಯೇ ಪ್ರಥಮ. ಜೈನ ಧರ್ಮದಲ್ಲಿ ಪೂರ್ವ ಜನ್ಮದ ತಪ್ಪು ಅಥವಾ ಈ ಜನ್ಮದ ತಪ್ಪುಗಳಿಗೆ ಉಪಸರ್ಗಗಳನ್ನು ಅನುಭವಿಸಬೇಕಾಗುತ್ತದೆ. ಮುನಿಗಳಿಗಳಿಗೆ ಯಾವ ಕಾರಣಕ್ಕಾಗಿ ಈ ಉಪಸರ್ಗ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ರಕ್ಷಣೆಯನ್ನು ಕೊಡಬೇಕಿದೆ
ಕೃತ್ಯ ಎಸಗಿದವರ ಬಂಧನ ಆಗಿರೋದು ತಿಳಿದುಬಂದಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಮತ್ತು ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಪ್ಪಿತಸ್ಥರಿಗೆ ತಕ್ಷ ಶಿಕ್ಷೆಯಾಗಬೇಕು. ಮುನಿಗಳಿಗೆ ಸರ್ಕಾರ ರಕ್ಷಣೆಯನ್ನು ಕೊಡಬೇಕಿದೆ ಎಂದು ಡಾ.ಡಿ ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಶ್ರೀ ಕಾಮಕುಮಾರ ಮುನಿ ಮಹಾರಾಜರು ಜುಲೈ 6ರಂದು ಇದ್ದಕ್ಕಿದ್ದಂತೆ ಮಠದಿಂದ ಕಾಣೆಯಾಗಿದ್ದರು. ಶ್ರೀಗಳು ಮಳೆಗಾಗಿ ಎಲ್ಲೋ ತಪಸ್ಸಿಗೆ ಕುಳಿತಿರಬಹುದು ಎಂದು ಹಿರೇಕೋಡಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಆದರೆ ಮಾಹಿತಿ ಸಿಗದಿದ್ದಾಗ ಚಿಕ್ಕೋಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.