ಉಡುಪಿ : ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಮುಳುಗಿ ಅರ್ಚಕರೊಬ್ಬರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ನಡೆದಿದೆ.
ಕಮಲಶಿಲೆ ಸಮೀಪದ ತಪ್ಪಲು ನಿವಾಸಿ ಶೇಷಾದ್ರಿ ಐತಾಳ್ (75) ಮೃತ ಅರ್ಚಕ ಎಂದು ಗುರುತಿಸಲಾಗಿದೆ. ನದಿಗೆ ಬಿದ್ದ ಸ್ಥಳದಿಂದ ಸುಮಾರು ನೂರು ಮೀಟರ್ ದೂರಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
ಕಾಲು ಜಾರಿ ಬಿದ್ದು ನೀರು ಪಾಲು
ಕಳೆದ ಎರಡು ದಿನಗಳಿಂದ ಸುರಿದ ನಿರಂತರ ಮಳೆಗೆ ಕಮಲಶಿಲೆ ದೇಗುಲದ ಪಕ್ಕದಲ್ಲಿ ಹರಿಯುವ ಕುಬ್ಜಾ ನದಿ ಉಕ್ಕಿ ಹರಿಯುತ್ತಿದೆ. ಎಂದಿನಂತೆ ಶೇಷಾದ್ರಿ ಐತಾಳ್ ಅವರು ಇಂದು ಪ್ರಸಿದ್ಧ ದೇವಾಲಯ ಕಮಲಶಿಲೆಗೆ ಪೂಜೆ ಮಾಡಲು ಆಗಮಿಸಿದ್ದರು. ಈ ವೇಳೆ ಅರ್ಚಕರು ಕಾಲು ಜಾರಿ ನದಿಗೆ ಬಿದ್ದು ನೀರು ಪಾಲಾಗಿದ್ದಾರೆ.
ಮುಳುಗು ತಜ್ಞ ಮಂಜುನಾಥ್ ನಾಯಕ್ ತಂಡ ಮೃತದೇಹ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಳೆ ನೀರಿನಲ್ಲಿ ಕಾಲು ಜಾರಿ ಬಿದ್ದು ವೃದ್ಧೆ ಸಾವು
ಬನ್ನಂಜೆ ಗರಡಿ ಜಲಾವೃತ
ವರುಣನ ಅಬ್ಬರಕ್ಕೆ ಬನ್ನಂಜೆ ಗರಡಿ ಜಲಾವೃತಗೊಂಡಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ರಭಸಕ್ಕೆ ಹಳ್ಳ ತೊಡು ಕಾಲುವೆ ನದಿಗಳು ಭರ್ತಿಯಾಗಿ ಉಕ್ಕಿ ಹರಿಯುತ್ತಿದೆ.
ಅಷ್ಟೆ ಅಲ್ಲದೆ ಕೃತಕ ನೆರೆ ಸೃಷ್ಟಿಯಾಗಿದ್ದು, ಜನರು ಸಂಚರಿಸಲು ಪರದಾಡುವಂತಾಗಿದೆ. ಬನ್ನಂಜೆ ಸುತ್ತಮುತ್ತ ಇರುವ ಹಲವು ಮನೆಗಳಿಗೂ ನೀರು ನುಗ್ಗಿದೆ. ನೆರೆ ನೀರು ನುಗ್ಗಿದ ಪರಿಣಾಮ ಸ್ಥಳೀಯ ನಿವಾಸಿಗಳು ವಾಹನ ಸವಾರರು ತೊಂದರೆ ಪಡುವಂತಾಯಿತು.