ಶಿವಮೊಗ್ಗ : ರಾಜ್ಯ ವಿಧಾನಸಭಾ ಚುನಾವಣೆ ಸೋಲಿನಿಂದ ಕೆಲವು ವ್ಯಕ್ತಿಗಳು ವಿಚಲಿತರಾಗಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಾವಿರಾರು ಮಂದಿ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ ಎಂದರು.
ಅಸಮಾಧಾನಿತರನ್ನು ಕೂರಿಸಿ ನಮ್ಮ ನಾಯಕರು ಮಾತನಾಡುತ್ತಿದ್ದಾರೆ. ಪಕ್ಷ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡುತ್ತದೆ. ಸೋಲಿನಿಂದ ಕೆಲವು ವ್ಯಕ್ತಿಗಳು ವಿಚಲಿತರಾಗಿದ್ದಾರೆ. ಯಾವುದೇ ಹೇಳಿಕೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಹೇಳಬೇಕು. ಮಾಧ್ಯಮದ ಮುಂದೆ ಮಾತನಾಡಬಾರದು. ಬಹಿರಂಗವಾಗಿ ಟೀಕೆ ಮಾಡೋದು ಸರಿಯಲ್ಲ ಎಂದು ತಿಳಿಸಿದರು.
ಇದನ್ನೂ ಓದಿ : ಸ್ವಪಕ್ಷೀಯರ ವಿರುದ್ಧವೇ ಬೆಂಕಿಯುಗುಳಿದ ರೇಣುಕಾಚಾರ್ಯ
ಅರ್ಹತೆ ಇರೋರನ್ನು ನೇಮಕ ಮಾಡ್ತಾರೆ
ಎಲ್ಲರೂ ಸಹನೆಯಿಂದ ಪಕ್ಷ ಕಟ್ಟುವ ಕೆಲಸ ಮಾಡಬೇಕು. ಉಸ್ತುವಾರಿಗಳನ್ನು ಬೇರೆ ಬೇರೆಯವರನ್ನು ನೇಮಕ ಮಾಡುತ್ತಾರೆ. ಬಹಳಷ್ಟು ಜನ ಗೆಲ್ಲದಿದ್ದವರು ಇದ್ದಾರೆ. ಸಂಘಟನೆ ಕೆಲಸ ಮಾಡಲ್ಲ ಅಂತ ಏನೂ ಇಲ್ಲ. ಯಾರಿಗೆ ಕೆಲಸ ಮಾಡುವ ಅರ್ಹತೆ ಇದೆಯೋ ಅವರನ್ನು ನೇಮಕ ಮಾಡುತ್ತಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ದುಡ್ಡು ತಿನ್ನೋಕೆ ಆಗುತ್ತಾ ಅಂದ್ರು
ರಾಜ್ಯ ಸರ್ಕಾರ ಅಕ್ಕಿ ಬದಲಿಗೆ ಹಣ ಕೊಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಹಣ ಕೊಡಿ ಅಂದಾಗ ದುಡ್ಡು ತಿನ್ನೋಕೆ ಆಗುತ್ತಾ? ಅಂದ್ರು. ಅಕ್ಕಿ ಕೊಡೋದು ಊಟಕ್ಕೆ, ದುಡ್ಡು ಊಟ ಮಾಡೋಕೆ ಆಗಲ್ಲ ಅಂದಿದ್ದರು ಸಿದ್ದರಾಮಯ್ಯ. ಈಗ ಹಣ ಕೊಡ್ತೀವಿ ಅಂತಿದ್ದಾರೆ. 10 ಕಿಲೋ ಅಕ್ಕಿ ಕೊಡ್ತೀವಿ ಅಂದವರು, 5 ಕಿಲೋ ಅಕ್ಕಿಗೆ ಹಣ ಕೊಡ್ತೀವಿ ಅಂತಿದ್ದಾರೆ. ಆಡಿದ ನಾಲಿಗೆಗೆ ತದ್ವಿರುದ್ದ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ಅನ್ಯಾಯ ಎಂದು ಛೇಡಿಸಿದರು.