ಬೆಂಗಳೂರು : ನಮಗೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ತಯಾರಿಲ್ಲ. ಬಡವರ ಕಾರ್ಯಕ್ರಮಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು, ಕೇಂದ್ರ ಸರ್ಕಾರದವರು ಬಡವರ ಕಾರ್ಯಕ್ರಮಕ್ಕೆ ಕಲ್ಲು ಹಾಕುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಣ ಕೊಡುತ್ತೇವೆ ಎಂದರೂ ಕೇಂದ್ರ ಅಕ್ಕಿ ಪೂರೈಸಲು ಕೇಂದ್ರದವರು ಸಿದ್ದರಿಲ್ಲ. ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರನ್ನು ಸಚಿವ ಕೆ.ಹೆಚ್ ಮುನಿಯಪ್ಪ ಅವರನ್ನು ಭೇಟಿ ಮಾಡಿದ್ದರು. ಪಿಯೂಷ್ ಗೋಯಲ್ ಅಕ್ಕಿ ಇಲ್ಲ ಅಂದಿದ್ದಾರೆ. ಓಪನ್ ಮಾರ್ಕೆಟ್ ಟೆಂಡರ್ ಕರೆಯಲು ಹೊರಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೆನು. ಆಹಾರ ಸಚಿವ ಪಿಯೂಷ್ ಗೋಯಲ್ ಅವರಿಗೆ ಹೇಳುತ್ತೇನೆ ಎಂದಿದ್ದರು. ನಂತರ ಗೋಯಲ್ ಅವರನ್ನು ಮುನಿಯಪ್ಪ ಭೇಟಿಯಾಗಿ ಮನವಿ ಮಾಡಿದ್ದರು. ರಾಜ್ಯಕ್ಕೆ ಅಕ್ಕಿ ಪೂರೈಸಲು ಆಗುವುದಿಲ್ಲ ಅಂತ ಗೋಯಲ್ ಹೇಳಿದ್ದರು ಎಂದು ಆಕ್ರೋಶ ಹೊರಹಾಕಿದರು.
10 ಕಿಲೋ ಅಕ್ಕಿ ಕೊಡ್ತೀವಿ ಎಂದಿದ್ವಿ
ಜುಲೈ 1ರಿಂದ 10 ಕಿಲೋ ಆಹಾರ ಧಾನ್ಯ ನೀಡುವುದಾಗಿ ಭರವಸೆ ನೀಡಿದ್ದೆವು. ಜನರಿಗೆ ನಾವು ನೀಡಿದ ಭರವಸೆಯಂತೆ ಹಣ ನೀಡಲು ನಿರ್ಧರಿಸಿದ್ದೇವೆ. ಐದು ಕಿಲೋ ಅಕ್ಕಿ ಅಥವಾ ಆಹಾರ ಧಾನ್ಯ ಕೊಡ್ತೀವಿ ಅಂದಿದ್ವಿ. ಕೇಂದ್ರ ಸರ್ಕಾರ ಐದು ಕಿಲೋ, ನಾವು ಐದು ಕಿಲೋ ಸೇರಿ 10 ಕಿಲೋ ಅಕ್ಕಿ ಕೊಡ್ತೀವಿ ಎಂದಿದ್ವಿ. ಪಾರದರ್ಶಕವಾಗಿ ಇರಲಿ ಎಂದು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.