ಬೆಂಗಳೂರು : ಭತ್ತ, ಅಕ್ಕಿ ಒಂದೇ ದಿನದಲ್ಲಿ ಬೆಳೆಯೋಕೆ ಆಗುತ್ತಾ? ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ಕೊಟ್ಟರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜನರಿಗೆ ಆಶ್ವಾಸನೆ ಕೊಟ್ಟಿದ್ದು ಕಾಂಗ್ರೆಸ್. ಭತ್ತ ಬೆಳೆದು ಆಮೆಲೆ ತಂದುಕೊಡ್ತೀನಿ ಅಂತ ಹೇಳಿರಲಿಲ್ಲ ಎಂದು ಕುಟುಕಿದರು.
ಪೂರ್ಣ ಪ್ರಮಾಣದ ಉಚಿತ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ. ಇನ್ನೂ ಐದು ದಿನ ಸಮಯ ಇದೆ. ಭತ್ತ ಬೆಳೆದಾದರೂ ಕೊಡಲಿ, ಅಕ್ಕಿ ಕೊಂಡಾದರೂ ತಂದು ಕೊಡಲಿ. ಯಾವ ವಿಶ್ವಾಸದ ಮೇಲೆ ಹೇಳಿದ್ರೋ ಅದೇ ವಿಶ್ವಾಸದ ಮೇಲೆ ಕೊಡಬೇಕು. ಮಳೆ ಬಂದಿಲ್ಲ, ಭತ್ತ ಎಲ್ಲಿಂದ ಬೆಳೆದು ತಂದುಕೊಡಲಿ ಅಂದ್ರೆ ಹೇಗೆ? ಎಂದು ಡಿಕೆಶಿಗೆ ಟಕ್ಕರ್ ಕೊಟ್ಟರು.
ಇದನ್ನೂ ಓದಿ : 365 ದಿನವೂ ಬಿಜೆಪಿಯವರು ಪ್ರತಿಭಟನೆ ಮಾಡಲಿ : ಡಿ.ಕೆ ಶಿವಕುಮಾರ್ ತಿರುಗೇಟು
ಸಾರ್ವಜನಿಕವಾಗಿ ಚರ್ಚೆ ಮಾಡಲ್ಲ
ವಲಸಿಗರ ಬಗ್ಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ನಾನು ಇದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡೋಕೆ ಹೋಗಲ್ಲ. ನಾನು ಅವತ್ತು ದೆಹಲಿಯಲ್ಲಿ ಕೇವಲ ಅರ್ಕಾವತಿಗೆ ಸಂಬಂಧಿಸಿದಂತೆ ಮಾತ್ರ ಹೇಳಿದ್ದೇನೆ. ಅರ್ಕಾವತಿ ವಿಷಯದಲ್ಲಿ ನಾವು ಬಿಗಿ ನಿಲುವು ತೆಗೆದುಕೊಂಡಿದ್ರೆ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದೆ. ಎಲ್ಲವನ್ನು ಬಂದವರ ತಲೆ ಮೇಲೆ ಕಟ್ಟೋಕೆ ಇಷ್ಟಪಡಲ್ಲ ಎಂದು ಹೇಳಿದರು.
ಯಾರು ಸರಿ ಅಂತ ಹೇಳೋದಿಲ್ಲ
ನಾನು ಯಾರು ಸರಿ ಅಂತಲೂ ಹೇಳೋದಿಲ್ಲ. ಆದರೆ, ಪಕ್ಷದ ವೇದಿಕೆಯಲ್ಲಿ ಏನೇ ಇದ್ರು ಮಾತನಾಡ್ತೀನಿ. ಅಧಿಕಾರಕ್ಕೆ ಬರುತ್ತೇವೆ ಅಂತ ನಿರೀಕ್ಷೆ ಇತ್ತು. ಆದರೆ, ನಾವು ಅಧಿಕಾರ ಕಳೆದುಕೊಂಡಿದ್ದೇವೆ. ಲೋಕಸಭಾ ಚುನಾವಣೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಬರುತ್ತಿದೆ. ನಮ್ಮಿಂದ ಏನು ತಪ್ಪು ಆಗಿಲ್ಲ ಅನ್ನೋದು ಬೇಡ, ಕೆಲ ತಪ್ಪಾಗಿದೆ. ಆ ತಪ್ಪು ಆಗದ ರೀತಿ ಮುಂದೆ ಹೋಗೋಣ ಎಂದು ಸಿ.ಟಿ ರವಿ ತಿಳಿಸಿದರು.