ಹಾಸನ : ಜೆಡಿಎಸ್ ಜೊತೆ ಮೈತ್ರಿ ಮಾಡ್ಕೊಂಡು ನೋಡಲಿ ಪರಿಣಾಮ ಎದುರಿಸುತ್ತಾರೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಕುರಿತು ಹಾಸನದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಅದು ಅವರವರ ಪಕ್ಷದ ನಿಲುವು. ಅವರು ಏನೇನು ಮಾಡಿಕೊಳ್ತಾರೆ, ಅದು ಅವರವರ ಇಷ್ಟ. ನಾನು ಮೈತ್ರಿ ಮಾಡಿಕೊಳ್ಳಬೇಡಿ ಅಂದ್ರೆ ಬಿಡ್ತರಾ, ಬೇಕು ಅಂದ್ರೆ ಮಾಡ್ತರಾ? ಮೈತ್ರಿ ಮಾಡ್ಕೊಂಡು ನೋಡಲಿ ಪರಿಣಾಮ ಎದುರಿಸುತ್ತಾರೆ ಎಂದು ಟಕ್ಕರ್ ಕೊಟ್ಟಿದ್ದಾರೆ.
ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ಬಹುಮತ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 30 ಬಾರಿ ರಾಜ್ಯಕ್ಕೆ ಬಂದು ರೋಡ್ ಶೋ ಮಾಡಿ ಹೋದರು. ಆದರೂ, ಕರ್ನಾಟಕದ ಜನ ಜಗ್ಗಲಿಲ್ಲ. ಅದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ. 25 ಜನ ಸಂಸದರು ಅಕ್ಕಿ ಕೊಡಿಸದೆ ವೋಟು ಕೇಳಲು ಬರಲಿ. 10 ಜಿಲೋಗೆ ಹತ್ತು ಕಾಳು ಅಕ್ಕಿ ಕಡಿಮೆ ಕೊಡಲ್ಲ, ಹತ್ತು ಕಾಳು ಜಾಸ್ತಿ ಕೊಡ್ತೀವಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ನಮಗೆ ಮೈತ್ರಿ ಪ್ರಪೋಸಲ್ ಬಂದಿದೆ : ಡಿಕೆಶಿ
ಮಂತ್ರಿ ಆಗೋಕೆ ಅದೃಷ್ಟ ಬೇಕಲ್ವಾ?
ಶಿವಲಿಂಗೇಗೌಡರು ಮಂತ್ರಿ ಆಗ್ತಾರೆ ಎಂಬ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಇದು ರಾಷ್ಟ್ರೀಯ ಪಕ್ಷ, ಅದೆಲ್ಲ ಪಕ್ಷದ ಒಳಗೆ ನಿರ್ಣಯ ಆಗುತ್ತದೆ. ಹೈಕಮಾಂಡ್ ಇದೆ ಮಾಡ್ತಾರೆ, ಉಸ್ತುವಾರಿ ಸಚಿವರು ಅವರ ಅಭಿಪ್ರಾಯ ಹೇಳಿದ್ದಾರೆ. ಏನು ಆಗುತ್ತೆ ಕಾದು ನೋಡಣ. ಅದೃಷ್ಟನು ಬೇಕಲ್ಲ, ಅದೃಷ್ಟ ಇದ್ರೆ ಆಗುತ್ತೆ ಎಂದು ಹೇಳಿದ್ದಾರೆ.
ರೋಡ್‌ನಲ್ಲಿ ಉರುಳುರುಳಿ ಪಕ್ಷ ಕಟ್ತೀವಿ
ಜನರ ನಿರೀಕ್ಷೆ ಯಾವತ್ತು ಸುಳ್ಳಾಗಲ್ಲ. ರಾಜ್ಯದಲ್ಲಿ ಜನ ತೀರ್ಮಾನ ಮಾಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಜನ ತೀರ್ಮಾನ ಮಾಡಿದ್ದಾರೆ. ಮಂತ್ರಿ ಆಗುವ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡೋಣ. ಮಂತ್ರಿಯಾಗದಿದ್ದರೆ ನಾನೇನು ಎಲ್ಲಿಗೂ ಬರಲ್ವಾ? ಇನ್ನುಮುಂದೆ ರೋಡ್‌ನಲ್ಲಿ ಉರುಳುರುಳಿ ಹೋಗಿ ಪಕ್ಷ ಕಟ್ತೀವಿ. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಯಶಸ್ವಿಯಾಗಿ ಕಟ್ಟುವ ಕೆಲಸ ಮಾಡ್ತೀನಿ ಎಂದು ಶಿವಲಿಂಗೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.