ಬೆಂಗಳೂರು : ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಘೋಷಿಸಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿ ಮೂವರಿಗೆ ಟಿಕೆಟ್ ಘೋಷಿಸಿದೆ. ಶೆಟ್ಟರ್, ಸಚಿವ ಬೋಸರಾಜು ಹಾಗೂ ತಿಪ್ಪಣ್ಣಪ್ಪ ಕಮಕನೂರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಶಾಸಕ ಲಕ್ಷ್ಮಣ ಸವದಿ, ಆರ್. ಶಂಕರ್ ಹಾಗೂ ಬಾಬುರಾವ್ ಚಿಂಚನಸೂರ್ ಅವರ ರಾಜೀನಾಮೆಯಿಂದ ತೆರವಾದ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದೆ.
ಚುನಾವಣಾ ಆಯೋಗದ ಅಧಿಸೂಚನೆಯ ಪ್ರಕಾರ, ನಾಳೆ (ಜೂನ್ 20) ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ. ಜೂನ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 23 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜೂನ್ 30ರಂದು ಮತದಾನ ಮತ್ತು ಮತ ಎಣಿಕೆ ನಡೆಯಲಿದೆ.
ಖರ್ಗೆ ಆಪ್ತ ಕಮಕನೂರ್ ಬಂಪರ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ತಿಪ್ಪಣ್ಣಪ್ಪ ಕಮಕನೂರ್ ಗೆ ಕಾಂಗ್ರೆಸ್ ಮಣೆ ಹಾಕಿದೆ. ಇನ್ನೂ ಬಾಬೂರಾವ್ ಚಿಂಚನಸೂರ್ ಗೆ ಟಿಕೆಟ್ ಕೈ ತಪ್ಪಿದೆ. ಬಾಬುರಾವ್ ಚುಂಚನಸೂರು ಅವರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಸ್ಥಾನಕ್ಕೆ ಸಚಿವ ಬೋಸರಾಜು ಅವರಿಗೆ ಟಿಕೆಟ್ ನೀಡಲಾಗಿದೆ.
ಆರ್. ಶಂಕರ್ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಅವರ ಸ್ಥಾನಕ್ಕೆ ತಿಪ್ಪಣ್ಣಪ್ಪ ಕಮಕನೂರ್ ಅವರಿಗೆ ಟಿಕೆಟ್ ನೀಡಲಾಗಿದೆ. ಲಕ್ಷ್ಮಣ್ ಸವದಿ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಅವರ ಸ್ಥಾನಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲಾಗಿದೆ.