ಬೆಂಗಳೂರು : ಒಡೆದು ಆಳುವ ‘ಬ್ರಿಟಿಷ್’ ಮನಸ್ಥಿತಿಯಿಂದ ಕಾಂಗ್ರೆಸಿಗರು ಹೊರ ಬರಬೇಕು ಎಂದು ಮಾಜಿ ಸಚಿವ ಬಿ.ಸಿ ನಾಗೇಶ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರ, ರಾಜ್ಯದ ಅರ್ಥ ವ್ಯವಸ್ಥೆಯನ್ನು ಹಾಳುಗೆಡವಿ, ದಿವಾಳಿ ಅಂಚಿಗೆ ತಳ್ಳುವ ಕೆಲಸಗಳನ್ನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶ-ವಿದೇಶಗಳಲ್ಲಿ ಮಳಿಗೆಗಳನ್ನು ಆರಂಭಿಸುವ ಮೂಲಕ KMF ‘ನಂದಿನಿ’ ಪ್ರತಿಷ್ಠಿತ ಬ್ರ್ಯಾಂಡ್ ಆಗಿ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿದೆ. ನಾಡಿನ ಹೆಮ್ಮೆಯ KMF ‘ನಂದಿನಿ’ಯನ್ನು ರಾಹುಲ್ ಗಾಂಧಿ ಮತ್ತು ರಾಜ್ಯದ ಕಾಂಗ್ರೆಸ್ಸಿಗರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು : ತೇಜಸ್ವಿ ಸೂರ್ಯ
ಜನರ ಜೀವನಕ್ಕೆ ಕಲ್ಲು ಹಾಕುತ್ತಿದೆ
ಕೆಎಂಎಫ್ ನಂಬಿಕೊಂಡಿರುವ ಲಕ್ಷಾಂತರ ರೈತರು ಹಾಗೂ ನೇರ, ಪರೋಕ್ಷವಾಗಿ ಉದ್ಯೋಗದಲ್ಲಿರುವ ಸಾವಿರಾರು ಜನರ ಉಪಜೀವನಕ್ಕೆ ಕಾಂಗ್ರೆಸ್ ಪಕ್ಷ ಕಲ್ಲು ಹಾಕುತ್ತಿದೆ. ಭಾಷೆ, ಪ್ರಾಂತ್ಯಗಳ ಆಧಾರದ ಮೇಲೆ ಜನರ ನಡುವೆ ವೈಮನಸ್ಸು ಮೂಡಿಸುವ, ಒಡೆದು ಆಳುವ ‘ಬ್ರಿಟಿಷ್’ ಮನಸ್ಥಿತಿಯಿಂದ ಕಾಂಗ್ರೆಸಿಗರು ಹೊರ ಬರಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ರೈತರ ಹಿತ ಕಾಯುವ ಕೆಲಸ ಮಾಡಬೇಕು. ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಎದುರಾಗುತ್ತಿರುವ ಅಡೆತಡೆಗಳನ್ನು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ನಿವಾರಿಸಬೇಕು. ಮತ್ತಷ್ಟು ಅನಾಹುತಗಳು ಎದುರಾಗುವ ಮೊದಲೇ ಎಚ್ಚೆತ್ತುಕೊಳ್ಳಬೇಕು. ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.