ಬೆಂಗಳೂರು : 5 ಉಚಿತ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಭಾನುವಾರ (ನಿನ್ನೆ)ದಿಂದ ಜಾರಿಯಾಗಿದ್ದು, ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಭಾರೀ ರೆಸ್ಪಾನ್ಸ್ ದೊರೆತಿದೆ.
ಹೌದು, ಮೊದಲ ದಿನವೇ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ನಿನ್ನೆ ಒಂದೇ ದಿನವೇ 5 ಲಕ್ಷ 71 ಸಾವಿರದ 23 ಮಹಿಳಾ ಪ್ರಯಾಣಿಕರು ಉಚಿತವಾಗಿ ಓಡಾಟ ನಡೆಸಿದ್ದಾರೆ.
ಭಾನುವಾರ (ನಿನ್ನೆ) ಮಧ್ಯಾಹ್ನ 1 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರಿಗೆ ಓಡಾಟ ನಡೆಸಿರುವ ಮಹಿಳಾ ಪ್ರಯಾಣಿಕರ ಬಗ್ಗೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಲೆಕ್ಕ ಕೊಟ್ಟಿವೆ. ಮಹಿಳಾ ಪ್ರಯಾಣಿಕರ ಪ್ರಯಾಣ ಮೌಲ್ಯ 1 ಕೋಟಿ 40 ಲಕ್ಷದ 22 ಸಾವಿರದ 878 ರೂಪಾಯಿ.
ಇದನ್ನೂ ಓದಿ : ಉಚಿತ ಪ್ರಯಾಣದಿಂದ ಬಸ್ ಫುಲ್ ರಶ್, ಆಯತಪ್ಪಿ ಬಿದ್ದು ವಿದ್ಯಾರ್ಥಿನಿ ಸಾವು
ನಿನ್ನೆ ಬಿಎಂಟಿಸಿ ಯಲ್ಲಿ 2 ಲಕ್ಷ 1 ಸಾವಿರದ 215 ಪ್ರಯಾಣಿಕರು ಓಡಾಟ ನಡೆಸಿದ್ದಾರೆ. ಕೆಎಸ್ಆರ್ಟಿಸಿಯಲ್ಲಿ 1,94,831, ವಾಯುವ್ಯ ಸಾರಿಗೆಯಲ್ಲಿ 1,22,354 ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 53 ಸಾವಿರದ 623 ಪ್ರಯಾಣಿಕರು ಓಡಾಟ ನಡೆಸಿದ್ದಾರೆ.
ಮಹಿಳೆಯರಿಗೆ ಉಚಿತ ಸ್ಮಾರ್ಟ್ ಕಾರ್ಡ್
ಸಿಎಂ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಯ ಲೋಗೋ ಬಿಡುಗಡೆ ಮಾಡುವ ಮೂಲಕ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದರು. ಇದೇ ವೇಳೆ ಶಕ್ತಿ ಯೋಜನೆಯ ಲೋಗೋ ಮತ್ತು ಸ್ಮಾರ್ಟ್ ಕಾರ್ಡ್ ಮಾದರಿಯನ್ನು ಅನಾವರಣ ಮಾಡಿದರು. ಸಮಾರಂಭದಲ್ಲಿ ಮಹಿಳೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದರು. ಮುಂದಿನ ದಿನಗಳಲ್ಲಿ ಉಚಿತವಾಗಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು.