ಬೆಂಗಳೂರು : ಯಾವುದೇ ಸ್ಥಾನಮಾನವನ್ನು ಕೊಟ್ರೂ ಕೂಡಾ ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಶಕ್ತಿ ನನಗೆ ಇದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಹಾಸನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೈಕಮಾಂಡ್ ಯಾವುದೇ ಹುದ್ದೆ ಕೊಟ್ಟರೂ ನಿರ್ವಹಿಸುವ ಶಕ್ತಿ ನನ್ನನ್ನೂ ಸೇರಿ ನಮ್ಮ ರಾಜ್ಯ ನಾಯಕರಲ್ಲಿದೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕರನ್ನಾಗಿ ಯಾರನ್ನು ಮಾಡಬೇಕು ಅಂತಾ ಮೊನ್ನೆ ನಡೆದ ಶಾಸಕರ ಸಭೆಯಲ್ಲಿ ಪಕ್ಷದ ಅಧ್ಯಕ್ಷರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅರುಣ್ ಸಿಂಗ್ ಅವರು ಅಭಿಪ್ರಾಯವನ್ನ ತೆಗೆದುಕೊಂಡಿದ್ದಾರೆ. ಒಂದೆರಡು ದಿನಗಳಲ್ಲಿ ತೀರ್ಮಾನ ಮಾಡಿ ಘೋಷಣೆ ಮಾಡ್ತಾರೆ ಅನ್ನೋ ವಿಶ್ವಾಸ ನಮಗಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾರಾಗಬೇಕು ಅನ್ನೋ ಪೈಯೋಟಿ ಏನಿಲ್ಲ
ಬಿಜೆಪಿ ರಾಜ್ಯಾಧ್ಯಕ್ಷ ರೇಸ್ ನಲ್ಲಿ ವಿಜಯೇಂದ್ರ ಎಂಬ ವಿಚಾರ ಕುರಿತು ಮಾತನಾಡಿ, ಬಿಜೆಪಿ ಅಧ್ಯಕ್ಷರು ಯಾರಾಗಬೇಕು ಅನ್ನೋ ಪೈಯೋಟಿ ಏನಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲಾ ಹಿರಿಯರು ಕೂತು ಏನು ತೀರ್ಮಾನ ಮಾಡ್ತಾರೆ, ಅದರ ಪ್ರಕಾರ ನಾವು ಸಾಗಬೇಕು. ನಮ್ಮಮುಂದೆ ಇರೋದು ಯಾರು ಅಧ್ಯಕ್ಷರಾಗ್ತಾರೆ, ಯಾರು ವಿರೋಧ ಪಕ್ಷದ ನಾಯಕರಾಗ್ತಾರೆ ಅನ್ನೋದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಕ್ಕೆ ಅವರದ್ದೇ ಆದ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸ್ವಲ್ಪ ಟೈಮ್ ಕೊಡಿ, 6 ಅಲ್ಲ.. 7ನೇ ಗ್ಯಾರಂಟಿನೂ ಬರುತ್ತೆ : ಪ್ರಿಯಾಂಕ್ ಖರ್ಗೆ
ಉತ್ತಮ ವಿರೋಧ ಪಕ್ಷದ ನಾಯಕನ ಆಯ್ಕೆ
ಒಬ್ಬ ಉತ್ತಮ ವಿರೋಧ ಪಕ್ಷದ ನಾಯಕನ್ನ ಆಯ್ಕೆ ಮಾಡಬೇಕಾಗುತ್ತದೆ. ಅದನ್ನ ಹಿರಿಯರು ತೀರ್ಮಾನ ಮಾಡ್ತಾರೆ. ಈಗಾಗಲೇ ಅಭಿಪ್ರಾಯ ತೆಗೆದುಕೊಂಡಿದ್ದಾರೆ. ಅದೇ ರೀತಿ ಅಧ್ಯಕ್ಷರ ವಿಚಾರದಲ್ಲಿಯೂ ಕೂಡಾ. ಪಕ್ಷ ಬಹಳ ಬಹಳ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿದೆ. ಸದ್ಯದಲ್ಲಿಯೇ ಅದನ್ನ ತೀರ್ಮಾನ ಮಾಡ್ತಾರೆ ಎಂದು ತಿಳಿಸಿದ್ದಾರೆ.
ಹೆಚ್ಚು ಗಂಭೀರವಾಗಿ ತೆಗೆದುಕೊಳ್ತೇವೆ
ಲೋಕಸಭಾ ಚುನಾವಣೆ ಬಿಜೆಪಿ ಟಾರ್ಗೆಟ್ ವಿಚಾರವಾಗಿ ಮಾತನಾಡಿ, ಮೊದಲ ಆದ್ಯತೆ ವಿರೋಧ ಪಕ್ಷದ ನಾಯಕರು. ತತ್ ಕ್ಷಣ ಆಯ್ಕೆ ಆಗಬೇಕು. ಬಳಿಕ, ಲೋಕಸಭೆ ಚುನಾವಣೆ ಇರಬಹುದು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ, ಬಿಬಿಎಂಪಿ ಚುನಾವಣೆ ಸೇರಿ ಎಲ್ಲವನ್ನು ಗಂಭೀರವಾಗಿ ನಾವು ತೆಗೆದುಕೊಂಡಿದ್ದೇವೆ. ಇನ್ನೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ತೇವೆ. ಇವೆಲ್ಲಾ ತೀರ್ಮಾನವಾದ ನಂತರ ಅದರ ಸರಿಯಾದ ಸ್ವರೂಪ ಸಿಗುತ್ತದೆ ಎಂದು ಹೇಳಿದ್ದಾರೆ.