ಬೆಂಗಳೂರು : ಚಕ್ರವರ್ತಿ ಸೂಲಿಬೆಲೆ ವಾಟ್ಸಪ್ ಯೂನಿವರ್ಸಿಟಿಯ ವಿದ್ಯಾರ್ಥಿ ಎಂದು ಹೇಳಿಕೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಿಯಾಂಕ್ ಖರ್ಗೆಯವರೇ, ಮೊದಲು ನಿಮ್ಮ ವಿದ್ಯಾರ್ಹತೆ ನೋಡಿಕೊಂಡು ಸೂಲಿಬೆಲೆ ಬಗ್ಗೆ ಮಾತನಾಡಿ. ನಿಮಗೆ ಪ್ರಶ್ನಿಸುವ ನೈತಿಕ ಹಕ್ಕು ಇಲ್ಲ ಎಂದು ಟಕ್ಕರ್ ಕೊಟ್ಟಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಎಂಜಿನಿಯರಿಂಗ್ ಮುಗಿಸಿ ಕೈ ತುಂಬಾ ವೇತನವಿದ್ದರೂ ಕೆಲಸ ತ್ಯಜಿಸಿದ್ದಾರೆ. ದೇಶದ ಭವಿಷ್ಯಕ್ಕಾಗಿ ಯುವ ಸಮೂಹದಲ್ಲಿ ರಾಷ್ಟ್ರೀಯತೆ, ದೇಶ ಭಕ್ತಿ ಉದ್ದೀಪನ ಗೊಳಿಸುತ್ತಿರುವ ಚಕ್ರವರ್ತಿ ಸೂಲಿಬೆಲೆಯ ವಿದ್ಯಾರ್ಹತೆಯನ್ನು ಪ್ರಥಮ ಪಿಯುಸಿ ಫೇಲ್ ಆದ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ ಎಂದು ಭರತ್ ಶೆಟ್ಟಿ ಕುಟುಕಿದ್ದಾರೆ.
ಇದನ್ನೂ ಓದಿ : ನೀರಿನ ಬಿಲ್ ಹೆಚ್ಚಾದರೆ ವಾಪಸ್ ಕಳುಹಿಸಿ : ಶಾಸಕ ಯತ್ನಾಳ್
ದೇಶದಲ್ಲಿ ರಾಷ್ಟ್ರೀಯತೆಯನ್ನು, ದೇಶ ಪ್ರೇಮವನ್ನು ಜಾಗೃತಿ ಮಾಡುವುದೇ ಅಪರಾಧವೆಂದು ಪ್ರಿಯಾಂಕ್ ಖರ್ಗೆ ತಿಳಿದಂತಿದೆ. ದೇಶ ಭಕ್ತಿ, ನಮ್ಮ ರಾಷ್ಟ್ರ ಎಂಬ ಭಾವನೆಯನ್ನು ನಮ್ಮ ಭವಿಷ್ಯದ ಮಕ್ಕಳಿಗೆ ಯಾವತ್ತೂ ತಿಳಿಸುವ ಗೋಜಿಗೆ ಹೋಗದ ಕಾಂಗ್ರೆಸ್ ಪಕ್ಷ ದೇಶದೊಳಗೆ ಭಯೋತ್ಪಾದಕನಿಗೆ ಏನಾದಾರೂ ಆದರೆ ಕಣ್ಣೀರಿಡುವ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಪಠ್ಯ ಪರಿಷ್ಕರಣೆ ಬಗ್ಗೆ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ಚಕ್ರವರ್ತಿ ಸೂಲಿಬೆಲೆ ವಾಟ್ಸಪ್ ಯೂನಿವರ್ಸಿಟಿಯಲ್ಲಿ ಓದಿರುವವರು. ನಾನು ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ಓದಿಲ್ಲ. ಆದರೂ ಅವರು ಬರೆದಿರುವ ಪಠ್ಯ ನಮ್ಮ ಮಕ್ಕಳು ಓದುವುದು ಬೇಡ. ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ? ಅವರು ಪಿಹೆಚ್ಡಿ(PHD) ಮಾಡಿದ್ದಾರಾ? ಬಾಡಿಗೆ ಭಾಷಣಕಾರರನ್ನೆಲ್ಲ ನೀವು ಲೇಖಕರು, ಸಾಹಿತಿಗಳು ಮಾಡಿದ್ದೀರಿ. ಅದನ್ನು ನಮ್ಮ ಮಕ್ಕಳು ಓದಬೇಕಾ? ಕರ್ನಾಟಕ ಸಾಹಿತ್ಯಕ್ಕೆ ಅಷ್ಟು ಬರ ಬಂದಿದೆಯಾ? ಯಾರು ಇವರೆಲ್ಲಾ? ಎಂದು ಹೇಳಿಕೆ ಹರಿಬಿಟ್ಟಿದ್ದರು.