ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಫಾರ್ಮ್ ಬಿಡುಗಡೆಯಾಗಿದೆ.
ಈ ಫಾರ್ಮ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೆಸರು ಹಾಗೂ ಫೋಟೋ ನಮೂದಿಸಲಾಗಿದೆ.
ಈ ಫಾರ್ಮ್ ನಲ್ಲಿ 8 ಕಾಲಂಗಳನ್ನು ನೀಡಲಾಗಿದೆ. ಮನೆಯೊಡತಿಯ ಹೆಸರು, ಬ್ಯಾಂಕ್ ಖಾತೆ ನಂಬರ್, ಆಧಾರ್ ಸಂಖ್ಯೆ, ನಮೂದಿಸುವುದು ಕಡ್ಡಾಯವಾಗಿದೆ. ಇದಲ್ಲದೆ ಜಾತಿ, ಉದ್ಯೋಗ, ಮೊಬೈಲ್ ಸಂಖ್ಯೆ, ಗಂಡ ಅಥವಾ ಅವಲಂಭಿತರ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಹಾಗೂ ಅಗತ್ಯ ಮಾಹಿತಿ ನಮೂದಿಸಬೇಕಿದೆ.
ಇದನ್ನೂ ಓದಿ : ನನ್ನ ಹೆಂಡತಿಗೂ ಬಸ್ ಪ್ರಯಾಣ ಉಚಿತ : ಸಿಎಂ ಸಿದ್ದರಾಮಯ್ಯ
ಸಿಎಂ ನೇತ್ರತ್ವದಲ್ಲಿ ಸಭೆ
ಗೃಹಲಕ್ಷ್ಮಿ ಯೋಜನೆ ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ನೇತ್ರತ್ವದಲ್ಲಿ ಇಂದು ಸಭೆ ನಡೆಯಲಿದೆ. ಕಂದಾಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಮಧ್ಯಾಹ್ನ 12.30ಕ್ಕೆ ಸಿಎಂ ಸಭೆ ನಡೆಸಿ ಚರ್ಚಿಸಲಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯಲ್ಲಿನ ಗೊಂದಲ ಬಗೆಹರಿಸಲು ಸಭೆ ಕರೆಯಲಾಗಿದೆ ಎಂದು ತಿಳಿದುಬಂದಿದೆ. ಒಂದೇ ಮನೆಯಿಂದ ಇಬ್ಬರು ಅರ್ಜಿ ಹಾಕಿದ್ರೆ ಯಾರಿಗೆ ಹಣ ಪಾವತಿಸಬೇಕು? ಅತ್ತೆ, ಸೊಸೆಯಲ್ಲಿ ಯಾರಿಗೆ ಹಣಕೊಡಬೇಕು? ಅಕ್ಕ, ತಂಗಿಯರಲ್ಲಿ ಹಣಪಾವತಿ ಯಾರಿಗೆ? ಇಂತಹ ಕೆಲವು ಪ್ರಶ್ನೆಗೆ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಲಿದ್ದಾರೆ.
ಆ.15ರಂದು ಗೃಹಲಕ್ಷ್ಮೀಗೆ ಚಾಲನೆ
ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಯೋಜನೆಗೆ ಚಾಲನೆ ನೀಡಲಾಗುವುದು. ಯಾವುದೇ ಜಾತಿ, ಧರ್ಮ, ಭಾಷೆಯನ್ನು ಪರಿಗಣಿಸದೆ ನಾಡಿನ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ಸಹಾಯಧನವನ್ನು ನೀಡಲಾಗುವುದು. ಬಿಪಿಎಲ್, ಎಪಿಎಲ್ ಕುಟುಂಬದ ಮಹಿಳೆಯು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಆಧಾರ್ ಕಾರ್ಡ್‌ನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ತನ್ನನ್ನು ಮನೆಯ ಯಜಮಾನಿ ಎಂದು ಘೋಷಿಸಿಕೊಳ್ಳಬೇಕು. ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಅರ್ಜಿಗಳ ಪರಿಶೀಲನೆ, ತಂತ್ರಾಂಶ ಅಭಿವೃದ್ಧಿಪಡಿಸಿ ಯೋಜನೆಗೆ ಚಾಲನೆ ನೀಡಲಾಗುವುದು.