ಬೆಂಗಳೂರು : ನನ್ನನ್ನ ಸಿಎಂ ಮಾಡಬೇಕು ಅಂತ ನೀವು ಗೆಲ್ಲಿಸಿದ್ರಿ. ಹೈಕಮಾಂಡ್ ನನಗೆ ಡಿಸಿಎಂ ಜವಾಬ್ದಾರಿ ನೀಡಿದೆ. ಮುಂದೆ ಒಳ್ಳೆಯ ದಿನಗಳು ಬರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ರಾಮನಗರ ಜಿಲ್ಲೆ ಕನಕಪುರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಿತವಚನ ನೀಡಿದ್ದಾರೆ. ಅವರ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ. ಸ್ವಲ್ಪ ದಿನ ಕಾಯಬೇಕು ಎನ್ನುವ ಮೂಲಕ ಪರೋಕ್ಷವಾಗಿ ಮುಂದೆ ಸಿಎಂ ಆಗ್ತೀನಿ ಎಂದು ತಿಳಿಸಿದ್ದಾರೆ.
ಯಾರೂ ಜೂಜಾಟ ವ್ಯಸನಕ್ಕೆ ಹೋಗ್ಬೇಡಿ
ನಾವು ಗೆದ್ದಿದ್ದೇವೆ ಅಂತ ಇತರ ಪಕ್ಷಗಳ ಮೇಲೆ ದಬ್ಬಾಳಿಕೆ ಮಾಡುವುದು ಬೇಡ. ಜೆಡಿಎಸ್ ಹಾಗೂ ಬಿಜೆಪಿಯವರನ್ನು ಅಣಕಿಸೋದು ಬೇಡ. ಎಲ್ಲರೂ ಶಾಂತಿಯಿಂದ ವರ್ತಿಸಬೇಕು. ಯಾರೂ ಜೂಜಾಟ ಸೇರಿ ಇತರ ವ್ಯಸನಕ್ಕೆ ಹೋಗಬೇಡಿ ಎಂದು ಕನಕಪುರ ಕ್ಷೇತ್ರದ ಜನತೆಗೆ ಡಿ.ಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಜನರನ್ನು ಭಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ ನಡೆದಿದೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ನನಗೆ ಯಾವತ್ತೂ ಅಧಿಕಾರದ ಮದ ಇಲ್ಲ
ನೀವು ಕೊಟ್ಟಂತ ತೀರ್ಪು, ರಾಷ್ಟ್ರದ ಜನ ನೋಡಿದ್ದಾರೆ. ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು. ಜೀವನದಲ್ಲಿ ಯಾವುದು ಶಾಶ್ವತ ಅಲ್ಲ. ಕ್ಷೇತ್ರದಲ್ಲಿ ನೀವೆ ಅಭ್ಯರ್ಥಿ ಆಗಿದ್ರಿ. ನೀವೆ ನನ್ನನ್ನ ಹರಸಿ, ಅಣ್ಣ-ತಮ್ಮನ ರೀತಿ ಪ್ರೀತಿ ತೋರಿಸಿದ್ರಿ. ಎಲ್ಲಾ ಭಿನ್ನಾಭಿಪ್ರಾಯ ಬಿಟ್ಟು ಮತ ಕೊಟ್ಟಿದ್ದೀರಿ. ನಾನು ಕ್ಷೇತ್ರಕ್ಕೆ ಬಂದು ಮತ ಕೇಳದಿದ್ರೂ ನೀವೆ ಚುನಾವಣೆ ಮಾಡಿದ್ರಿ. ನಾಮಪತ್ರ ಸಲ್ಲಿಸಿ ಕೊನೆಯ ದಿನ ಕ್ಷೇತ್ರಕ್ಕೆ ಬಂದಿದ್ದೆ. ಆದರೆ, ನಿಮ್ಮ ಪ್ರೀತಿ ವಿಶ್ವಾಸ ನನ್ನನ್ನ ಗೆಲ್ಲಿಸಿದೆ ಎಂದು ಡಿಕೆಶಿ ಹೇಳಿದ್ದಾರೆ.
ಹೈಕಮಾಂಡ್ ನನ್ನನ್ನ ರಾಜ್ಯದ ಉಪಮುಖ್ಯಮಂತ್ರಿ ಮಾಡಿದೆ. ನಾನು ಎಷ್ಟೇ ಎತ್ತರಕ್ಕೆ ಬೆಳೆದ್ರು ಇಲ್ಲಿ ಮಾತ್ರ ನಿಮ್ಮ ಮನೆಮಗ. ನಾನು ಬಹಳ ಚಿಕ್ಕ ವಯಸ್ಸಿನಲ್ಲೇ ರಾಜಕಾರಣಕ್ಕೆ ಬಂದೆ. ನನಗೆ ಯಾವತ್ತೂ ಅಧಿಕಾರದ ಮದ ಇಲ್ಲ, ಮುಂದೆಯೂ ಇರಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ.