ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆಯಿಂದ ವಂಚಿತರಾಗಿದ್ದರು. ಅಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುಡ್ ನ್ಯೂಸ್ ನೀಡಿದೆ.
ಹೌದು, ಈ ಬಾರಿ ಮಾರ್ಚ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾತಿ ಕೊರತೆಯಿಂದಾಗಿ 26 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದರು. ಇಂತಹ ವಿದ್ಯಾರ್ಥಿಗಳಿಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಂಡು ಪೂರಕ ಪರೀಕ್ಷೆ ಬರೆಯಲು ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ ಅವಕಾಶ ನೀಡಿದೆ.
ಜೂನ್ 12ರಿಂದ 29ರವರೆಗೆ ನಡೆಯಲಿರುವ ಈ ಬಾರಿಯ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ನೋಂದಣಿ ಶುಲ್ಕವನ್ನು ನೆಫ್ಟ್ ಚಲನ್‌ನಲ್ಲಿ ಭರ್ತಿ ಮಾಡಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮೇ 29ರೊಳಗೆ ಜಮೆ ಮಾಡಬೇಕು. ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅರ್ಹ ವಿದ್ಯಾರ್ಥಿಗಳನ್ನು ನಿಯಮಾನುಸಾರ ನೋಂದಾಯಿಸುವುದು ಶಾಲಾ ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ : SSLC ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ
26,900 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ
ಈ ಬಾರಿ ಸುಮಾರು 26,900 ವಿದ್ಯಾರ್ಥಿಗಳು ನಿಗದಿತ ಹಾಜರಾತಿ ಇಲ್ಲದೆ ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಮುಖ್ಯ ಪರೀಕ್ಷೆಗೆ ಹಾಜರಾಗಲಾಗದೆ ವಂಚಿತರಾಗಿದ್ದರು. ಅಂತಹ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊಂಡು ಈ ವರ್ಷವೇ ಪರೀಕ್ಷೆ ಬರೆದರೆ ಉತ್ತೀರ್ಣರಾಗುವ ಅವಕಾಶ ಹೆಚ್ಚಿರುತ್ತದೆ. ಹಾಗಾಗಿ, ಅಂತಹ ಎಲ್ಲ ಮಕ್ಕಳಿಗೆ ಮೇ 26ರವರೆಗೆ ಖಾಸಗಿ ಅಭ್ಯರ್ಥಿಗಳಾಗಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಮುಖ್ಯಘಟ್ಟವಾಗಿದ್ದು, ಅನೇಕ ವಿದ್ಯಾರ್ಥಿಗಳು ಕೆಲ ಕಾರಣಗಳಿಂದ ಸರಿಯಾಗಿ ಶಾಲೆಗೆ ಹಾಜರಾಗದೇ ನಿಗದಿತ ಹಾಜರಾತಿಯನ್ನು ಕಾಪಾಡಿಕೊಳ್ಳಲು ಆಗಿರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಂಡಳಿಯು ಮತ್ತೊಂದು ಅವಕಾಶ ನೀಡಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕಿದೆ.