ಬೆಂಗಳೂರು: ಜೆಡಿಎಸ್ ಸೋಲಿನ ಹಿನ್ನೆಲೆ ಯಲ್ಲಿ ಇಂದು ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಆತ್ಮಾವಲೋಕನ ಸಭೆ ಹಮ್ಮಿಕೊಳ್ಳಲಾಗಿದೆ.
ಹೌದು,ಇಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಲಿದ್ದು, ಸಭೆಯಲ್ಲಿ ಜೆಡಿಎಸ್ ನಾಯಕರು ಸೋಲಿನ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ.ಅಲ್ಲದೆ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್, ಬಿಬಿಎಂಪಿ ಚುನಾವಣೆಗೆ ಪಕ್ಷವನ್ನ ಬಲಗೊಳಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಇನ್ನು ಪಕ್ಷದಲ್ಲಿ ಸಮುದಾಯದ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುವುದು ಹಾಗೂ 2ನೇ ಹಂತದ ನಾಯಕತ್ವ ಬೆಳೆಸುವ ಬಗ್ಗೆ ಕಾರ್ಯಕಾರಣಿಯಲ್ಲಿ ಚರ್ಚಿಸಲಾಗುತ್ತೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಅಂತರ ಕಾಯ್ದುಕೊಂಡು, ಸ್ವತಂತ್ರವಾಗಿ ಪಕ್ಷ ಸಂಘಟನೆ ಮಾಡಲು ರೂಪುರೇಷೆಗಳ ಬಗ್ಗೆ ಚರ್ಚೆ ಆಗಲಿದೆ.
ಈಗಾಗಲೇ ಜೆಡಿಎಸ್ ಹೀನಾಯ ಸೋಲಿನ ಹೊಣೆಯನ್ನ ಖುದ್ದು ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೊತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ ಪತ್ರವನ್ನ ದೇವೇಗೌಡರಿಗೆ ಸಲ್ಲಿಸಿದ್ದಾರೆ. ಆದ್ರೆ ಜೆಡಿಎಸ್ ರಾಜ್ಯಾಧ್ಯಕ್ಷರ ಸ್ಥಾನದಲ್ಲಿ ಸಿಎಂ ಇಬ್ರಾಹಿಂರನ್ನೇ ಮುಂದುವರಿಸೋಕೆ ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ.
ಇಂದಿನ ಸಭೆಯಲ್ಲಿ ರಾಜೀನಾಮೆ ಹಿಂಪಡೆದು ಹುದ್ದೆಯಲ್ಲಿ ಮುಂದುವರೆಯುವಂತೆ, ಸಿಎಂ ಇಬ್ರಾಹಿಂ ಮನವೊಲಿಸುವ ಸಾಧ್ಯತೆ ಇದೆ. ಇನ್ನು ಶಾಸಕರ ಸಭೆಗೆ ರೇವಣ್ಣ ಗೈರಾಗಿದ್ದು, ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಇವತ್ತಿನ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿಗೆ ಶಾಸಕ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹಾಜರಾಗ್ತಾರಾ ಎಂಬ ಬಗ್ಗೆ ಸಾಕಷ್ಟು ಕೂತೂಹಲ ಇದೆ. ಅದೇನೆ ಇರಲಿ, ಸೋತು ಸುಣ್ಣವಾಗಿರುವ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಮತ್ತೊಮ್ಮೆ ಎದ್ದು ಬರಲು ನಿರ್ಧರಿಸಿದೆ ಇಂದಿನ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಏನಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.