ಬೆಂಗಳೂರು : ರಾಜ್ಯದಲ್ಲಿ ಅಧಿಕಾರ ಹಂಚಿಕೆ ಇಲ್ಲ, ಸಿದ್ದರಾಮಯ್ಯ ಪೂರ್ಣವಧಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಸಚಿವ ಎಂಬಿ ಪಾಟೇಲ್ (MB Patil) ಹೇಳಿಕೆ ಕಾಂಗ್ರೆಸ್ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳ ನಡುವೆ ಕೋಲ್ಡ್ ವಾರ್ ಕಾರಣವಾಗಿದೆ.
ಹೌದು, ಯಾರೂ ಕೂಡ ಅನಗತ್ಯ ಹೇಳಿಕೆಗಳನ್ನು ನೀಡಬಾರದು. ಒಳ್ಳೆಯ ಆಡಳಿತ ನೀಡುವುದಷ್ಟೇ ಈಗ ನಮ್ಮ ಆದ್ಯತೆ. ಇದರ ಕಡೆಗೆ ಗಮನ ಕೊಡಬೇಕು. ಇದರ ಹೊರತಾಗಿ ಅನಗತ್ಯ ಹೇಳಿಕೆಗಳನ್ನು ನೀಡಬಾರದು ಎಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣದ ಸಚಿವರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಎಂ.ಬಿ ಪಾಟೇಲ್ ಹೇಳಿಕೆಗೆ ಹೇಳಿಕೆಗಳಿಗೆ ನಾವೂ ಕೂಡ ತೀಕ್ಷ್ಣವಾದ ಉತ್ತರವನ್ನು ನೀಡಬಹುದು. ಆದರೆ ಹಾಗೆ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಪರೋಕ್ಷವಾಗಿ ಪಾಟೀಲ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪಾಟೀಲ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಯಾರೂ ಚರ್ಚಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದೆ.