ಶಿವಮೊಗ್ಗ : ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಕೇವಲ ಎರಡು ದಿನ ಮಾತ್ರ ಬಾಕಿಯಿದೆ. ಮತಗಟ್ಟೆ ಸಮೀಕ್ಷೆ ಫಲಿತಾಂಶಗಳು ಕೈ ಪರವಾಗಿವೆ. ಆದರೆ, ಕೇಸರಿ ನಾಯಕರು ಈ ಸಮೀಕ್ಷೆಗಳಿಗೆ ತಲೆಕೆಡಿಸಿಕೊಂಡಿಲ್ಲ.
ಮತಗಟ್ಟೆ ಸಮೀಕ್ಷೆ ಕುರಿತು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನಮ್ಮ ಕ್ಷೇತ್ರದ ಮತಗಟ್ಟೆವಾರು ವರದಿ ಬಂದಿದೆ. ಲೀಡ್ ಎಷ್ಟು ಅನ್ನೋ ಜಿಜ್ಞಾಸೆ ಇದೆ ಅಷ್ಟೇ. ಅನೇಕ ಸಮೀಕ್ಷೆಗಳು ನಿನ್ನೆ ಬಂದಿವೆ. ಹಿಂದಿನ ಅನೇಕ ಚುನಾವಣೆಯಲ್ಲಿ ಸಮೀಕ್ಷೆ ತಲೆಕೆಳಗಾಗಿದೆ. ಯಾರೂ ನಿರೀಕ್ಷಿಸದ ಫಲಿತಾಂಶ ಬಂದಿದೆ ಎಂದು ಹೇಳಿದ್ದಾರೆ.
ಅದೃಶ ಈ ಬಾರಿ ಬಿಜೆಪಿ ಜೊತೆಗಿದೆ. ನಮ್ಮ ಪಕ್ಷ 120ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ. ಪಕ್ಷದ ಆಂತರಿಕ ಸಮೀಕ್ಷೆ ಇದನ್ನು ಹೇಳುತ್ತಿದೆ. ಹೀಗಾಗಿ, ಏನೂ ತೊಂದರೆ ಆಗೋದಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡುವ ಎಲ್ಲ ಸಾಧ್ಯತೆ ಇದೆ ಎಂದು ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : 31 ಸಾವಿರ ಬೂತ್ ಗಳಲ್ಲಿ ಬಿಜೆಪಿಗೆ ಮುನ್ನಡೆ : ಅಂಕಿಅಂಶ ಬಿಚ್ಚಿಟ್ಟ ಬಿ.ಎಲ್ ಸಂತೋಷ್
ತೀರ್ಥಹಳ್ಳಿಯಲ್ಲಿ ಬಿಜೆಪಿ ಗೆಲ್ಲುತ್ತೆ
ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಶಾಂತಿಯಿಂದ ಮತದಾನಕ್ಕೆ ಸಹಕರಿಸಿವೆ. ಎಲ್ಲ ಮತದಾರರಿಗೆ, ಅಧಿಕಾರಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತೀರ್ಥಹಳ್ಳಿಯಲ್ಲಿ ಬಿಜೆಪಿ ಖಂಡಿತ ಗೆಲ್ಲುತ್ತೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ 78.28% ಮತದಾನ
ಶಿವಮೊಗ್ಗ ಜಿಲ್ಲೆಯಲ್ಲಿ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಶೇ.78.28ರಷ್ಟು ಮತದಾನವಾಗಿದೆ. ಶನಿವಾರ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 84.83 ಅತೀ ಹೆಚ್ಚು ಹಾಗೂ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 68.47 ಅದಕ್ಕೆ ಕಡಿಮೆ ಮತದಾನವಾಗಿದೆ. ಉಳಿದಂತೆ ಶಿವಮೊಗ್ಗ 68.74, ಶಿವಮೊಗ್ಗ ಗ್ರಾಮಾಂತರ 83.71, ಶಿಕಾರಿಪುರ 82.57, ಸೊರಬ 82.97, ಸಾಗರ 80.29 ರಷ್ಟು ಮತದಾನವಾಗಿದೆ.