ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ 40 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ರಾಜ್ಯದ 9 ಜಿಲ್ಲೆಗಳಲ್ಲಿ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದವರಾದ ಎರವ, ಪಣಿಯ, ಹಕ್ಕಿ-ಪಿಕ್ಕಿ, ಗೌಡಲು, ಹಸಲರು, ಕಾಡುಕುರುಬ , ಜೇನುಕುರುಬ, ಕೊರಗ, ಮಲೈಕುಡಿ, ಸಿದ್ದಿ ಜನಾಂಗದ ಮತದಾರರಿಗಾಗಿ ಸಾಂಪ್ರದಾಯಿಕ ಮತಗಟ್ಟೆ ಸಿದ್ಧಪಡಿಸಲಾಗಿದೆ.
ಈ ಪೈಕಿ ಚಾಮರಾಜನಗರ ಜಿಲ್ಲೆಯಲ್ಲಿ 9, ಉಡುಪಿ ಜಿಲ್ಲೆಯಲ್ಲಿ 1, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 5, ಮೈಸೂರು ಜಿಲ್ಲೆಯಲ್ಲಿ 9, ಶಿವಮೊಗ್ಗ ಜಿಲ್ಲೆಯಲ್ಲಿ 3, ಚಿಕ್ಕಮಗಳೂರು ಜಿಲ್ಲೆಯಲ್ಲಿ 2 ಮತ್ತು ಹಾಸನ ಜಿಲ್ಲೆಯಲ್ಲಿ 1 ಮತಗಟ್ಟೆ ಸ್ಥಾಪಿಸಲಾಗಿದೆ.
ಬೆಳಗ್ಗೆ 7 ಗಂಟೆಗೆ ಮತದಾನ ಶುರು
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗಳಿಗೆ ಇಂದು ಸಿಬ್ಬಂದಿ ತೆರಳಲಿದ್ದಾರೆ ಎಂದು ಬೆಂಗಳೂರು ನಗರ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಇದನ್ನೂ ಓದಿ : ಗುಡ್ ನ್ಯೂಸ್ : ಮೇ 10ರಂದು ರಾಜ್ಯಾದ್ಯಂತ ವಿಶೇಷ ರೈಲು, ಬೆಳಗಾವಿಗೆ ಬಂಪರ್
ಬೆಂಗಳೂರಿನಲ್ಲಿ ಮಾತನಾಡಿದ ಅವರು, 42 ಸಾವಿರ ಜನರಿಗೆ ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಿದ್ದೇವೆ. ಮಸ್ಟರಿಂಗ್ ಸೆಂಟರ್ನಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದೇವೆ. ನಿಯೋಜಿತ ಸಿಬ್ಬಂದಿ ಆಯಾ ಮಸ್ಟರಿಂಗ್ ಸೆಂಟರ್ಗಳಲ್ಲಿ EVM ಪಡೆದು ಇಂದು ಸಂಜೆ ವೇಳೆಗೆ ಮತಗಟ್ಟೆಗೆ ತೆರಳ್ತಾರೆ. ನಾವು ಈಗಾಗ್ಲೇ ರೂಟ್ ಮ್ಯಾಪ್ ಫಿಕ್ಸ್ ಮಾಡಿದ್ದೇವೆ ಎಂದರು.
ಒಂದು ಬಸ್ನಲ್ಲಿ ಐದರಿಂದ ಆರು ಮತಗಟ್ಟೆಗಳಿಗೆ ಸಂಬಂಧಿಸಿದ ಸಿಬ್ಬಂದಿಯನ್ನು ಡ್ರಾಪ್ ಮಾಡಲಾಗುವುದು. ನಾಳೆ ಮತಗಟ್ಟೆಗಳಲ್ಲಿ ಬೆಳಿಗ್ಗೆ 5.30ಕ್ಕೆ ಅಣುಕು ಮತದಾನ ನಡೆಯಲಿದೆ. ನಂತರ ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗಲಿದೆ. EVMಗಳಲ್ಲಿ ದೋಷ ಕಂಡು ಬಂದರೆ ತಕ್ಷಣವೇ ಸರಿಪಡಿಸಲು ಸೆಕ್ಟರ್ ಆಫೀಸರ್ಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಮಹಿಳಾ ಮಾದರಿ ಮತಗಟ್ಟೆಗಳಿವೆ ಎಂದು ಹೇಳಿದ್ದಾರೆ.