ಶಿವಮೊಗ್ಗ : ರಾಹುಲ್ ಗಾಂಧಿಯಂತ ಪುಣ್ಯಾತ್ಮ ಪ್ರಧಾನಿಯಾಗಿದ್ದರೇ ದೇಶ ಏನ್ ಆಗುತ್ತಿತ್ತು. ಶ್ರೀಲಂಕಾ, ಪಾಕಿಸ್ತಾನಕ್ಕೂ ಮುಂಚೆ ಭಾರತ ದಿವಾಳಿಯಾಗುತ್ತಿತ್ತು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ಗುಡುಗಿದರು.
ಶಿವಮೊಗ್ಗ ಜಿಲ್ಲೆಯ ಆಯನೂರಿನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯುರಪ್ಪ ಅವರೊಂದಿಗೆ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಹಗಲು ರಾತ್ರಿ ಎನ್ನದೆ ದೇಶದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ದೇಶದ ಸ್ವಾಭಿಮಾನಿ ಜನರು ತಲೆ ಎತ್ತಿ ನಡೆಯುವ ಕಾಲ ಬಂದಿದೆ ಎಂದು ಪ್ರಧಾನಿ ಮೋದಿಯನ್ನು ಕೊಂಡಾಡಿದರು.
140 ಸ್ಥಾನಗಳನ್ನು ಗೆಲ್ಲಿಸುವ ಸವಾಲು
ನಾನು ನನ್ನ ಜೀವನದ ಮೊದಲ ಚುನಾವಣೆ ಎದುರಿಸುತ್ತಿದ್ದೇನೆ. ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತಿರುವುದು ನನ್ನ ಪುಣ್ಯ. ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆರಾಜೀನಾಮೆ ಕೊಟ್ಟು ಮನೆಯಲ್ಲಿ ಕೂರುತ್ತಾರೆ ಎಂದು ವಿರೋಧ ಪಕ್ಷದವರು ಭಾವಿಸಿದ್ದರು. ಆದರೆ, ಯಡಿಯೂರಪ್ಪನವರು 140 ಸ್ಥಾನಗಳನ್ನು ಗೆಲ್ಲಿಸುವ ಸವಾಲು ಹಾಕಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಯಡಿಯೂರಪ್ಪ ‘ರಟ್ಟೆ ಇನ್ನು ಗಟ್ಟೆ’ಯಿದೆ : ಬಿ.ವೈ ವಿಜಯೇಂದ್ರ
135 ಸ್ಥಾನ ಗೆದ್ದು ಸರ್ಕಾರ ರಚಿಸುತ್ತೇವೆ
ಶಿವಮೊಗ್ಗ ಜಿಲ್ಲೆಯ 7ಕ್ಕೆ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ಈ ಬಾರಿ 135 ಸ್ಥಾನ ಗೆದ್ದು ಯಾರ ಬೆಂಬಲಿವಿಲ್ಲದೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಬಂದಿದ್ದು ನಮ್ಮೆಲ್ಲರ ಸೌಭಾಗ್ಯ. ನೀವು ಭಾರತಕ್ಕೆ ಅಷ್ಟೇ ಪ್ರಧಾನಿ ಅಲ್ಲ, ನೀವು ವಿಶ್ವದ ನಾಯಕ. ಬಿಜೆಪಿ ಅಧಿಕಾರದಲ್ಲಿ ಶಿವಮೊಗ್ಗವನ್ನು ಮಾದರಿ ಜಿಲ್ಲೆಯಾಗಿ ಮಾಡಿದ್ದೇವೆ ಎಂದು ತಿಳಿಸಿದರು.