ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ರೋಡ್ ಶೋನಿಂದ ಜನರಿಗೆ ತೊಂದರೆಯೇ ಹೊರತು ಬಿಜೆಪಿಗೆ ಅದರಿಂದ ಏನು ಲಾಭ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಜನರಿಗೆ ತೊಂದರೆ ಕೊಟ್ಟು ರೋಡ್ ಶೋ ಮಾಡುತ್ತಿದ್ದಾರೆ. ರೋಡ್ ಶೋನಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ರೋಡ್ ಶೋ ಮಾಡ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ರೋಡ್ ಶೋ ಯಾಕೆ ಮಾಡ್ತೀರಾ?
ನಾಳೆ ನೀಟ್ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ರೋಡ್ ಶೋ ಪರಿಣಾಮ ಬೀರುತ್ತದೆ. ಮನೆ ಬಾಗಿಲು ತೆಗೆಯಬೇಡಿ, ಓಣಿಯಲ್ಲಿ ಓಡಾಡಬೇಡಿ ಅಂತಾರೆ. ಹಾಗದರೆ ರೋಡ್ ಶೋ ಯಾಕೆ ಮಾಡ್ತೀರಾ? ಯಾರೋ ಕೆಲವರನ್ನು ತುಂಬಿಕೊಬಂದು ನಿಲ್ಲಿಸಿ ‘ಮೋದಿ..ಮೋದಿ..’ ಎಂದು ಕೂಗಿಸಿಕೊಂಡು ಹೋಗ್ತಾರೆ. ಇದರಿಂದ ಜನರಿಗೆ ತೊಂದರೆಯೇ ಹೊರತು ಬಿಜೆಪಿಗೆ ಲಾಭ ಇಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ : ನಾನ್ಯಾಕೆ ಸುಮಲತಾ ಬಗ್ಗೆ ಟೀಕೆ ಮಾಡಲಿ : ಎಚ್.ಡಿ ಕುಮಾರಸ್ವಾಮಿ
ಸಿದ್ದು ಹೃದಯದಲ್ಲಿ ಇರುವುದನ್ನೇ ಹೇಳ್ತಾರೆ
ಕುಮಾರಸ್ವಾಮಿಗೆ ಸಿದ್ಧಾಂತ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರಿಗೆ ಯಾವ ಸಿದ್ಧಾಂತವಿದೆ. ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಅನ್ನೇ ಮುಗಿಸಿ ಎನ್ನುತ್ತಾರೆ. ಅವರ ಹೃದಯದಲ್ಲಿರುವುದನ್ನು ಹೇಳುತ್ತಾರೆ. ಆಮೇಲೆ ಇಲ್ಲ.. ಇಲ್ಲ.. ಬಿಜೆಪಿ ಮುಗಿಸಿ ಅಂತಾರೆ. ಇದು ಅವರ ಸಿದ್ಧಾಂತ ಎಂದು ತಿರುಗೇಟು ಕೊಟ್ಟರು.
ಇವರು ಜಾತ್ಯಾತೀತವಾದಿನಾ?
ಅಧಿಕಾರದಲ್ಲಿದ್ದಾಗ ಲಿಂಗಾಯತರ ಬಗ್ಗೆ ಮಾತನಾಡಿ ಈಗ ಲಿಂಗಾಯತರೇ ಕ್ಷಮಿಸಿ ಎಂದು ಹೇಳುತ್ತಿದ್ದಾರೆ. ಇವರು ಜಾತ್ಯಾತೀತವಾದಿನಾ? ಇವರ ಬಳಿ ಜಾತ್ಯಾತೀತವಾದ ಏನು ಎಂದು ಕಲಿಯಬೇಕಾ? ಪ್ರತಿ ಸಮಾಜಕ್ಕೆ ದೇವೆಗೌಡರು ಕೊಟ್ಟ ರಾಜಕೀಯ ಶಕ್ತಿನಾ ಇವರ ಕೈಯಲ್ಲಿ ಕೊಡೊಕಾಗುತ್ತಾ. ಐದು ವರ್ಷ ಸರ್ಕಾರ ನಡೆಸಿದ ಸಿದ್ದರಾಮಯ್ಯ ಕೊಟ್ರಾ?ಎಲ್ಲರಿಗಿಂತ ಹೆಚ್ಚಿನ ಅಡ್ಜಸ್ಟ್‌ಮೆಂಟ್ ರಾಜಕಾರಣ ಸಿದ್ದರಾಮಯ್ಯ ಅವರದು ಎಂದು ಕುಟುಕಿದರು.
ಮೊನ್ನೆ ನಾಗಮಂಗಲದಲ್ಲಿ ಭಾಷಣ ಮಾಡಿ ಪಶ್ಚಾತ್ತಾಪ ಪಡಲಿಲ್ವಾ? ಯಾರನ್ನೋ ಗೆಲ್ಲಿಸಿ ತಪ್ಪು ಮಾಡಿದ್ವಿ ಅಂತಾ ಹೇಳಿಲ್ವಾ? ಅದಕ್ಕಿಂತ ಬೇಕಾ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.