ಬೆಂಗಳೂರು : ನಟಿ ರಮ್ಯಾ ಅವರು ಬಿಜೆಪಿಯಿಂದ ನನಗೆ ಆಹ್ವಾನವಿತ್ತು ಎಂದು ಹೇಳಿರುವ ವಿಚಾರದ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಟಿ ರಮ್ಯಾರನ್ನು ಕರೆಯುವಷ್ಟು ಬಿಜೆಪಿ ಅಷ್ಟೊಂದು ಬರಗೆಟ್ಟು ಹೋಗಿಲ್ಲ. ಶೆಟ್ಟರ್, ಸವದಿ ಬಿಟ್ಟು ಹೋದ ಸಮಯದಲ್ಲೇ ತಲೆಕೆಡಿಸಿಕೊಂಡಿಲ್ಲ. ರಮ್ಯಾ ಕಾಂಗ್ರೆಸ್ನಲ್ಲಿದ್ದವರು, ಲಾಭಕ್ಕಾಗಿ ಹಾಗೆ ಹೇಳಿರಬಹುದು. ಬಿಜೆಪಿಗೆ ರಮ್ಯಾರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಕನಕಪುರದಲ್ಲಿ ಸ್ಪರ್ಧಿಸಲು ಮೋದಿ ಸೂಚನೆ
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಟಿ.ಬೇಕುಪ್ಪೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಅವರು ಪ್ರಚಾರ ಆರಂಭಿಸಿದ್ದಾರೆ. ಕನಕಪುರ ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕನಕಪುರದಲ್ಲಿ ಸ್ಪರ್ಧೆ ಮಾಡು ಎಂದು ಮೋದಿ ಕಳುಹಿಸಿದ್ದಾರೆ. ಇಡೀ ಕನಕಪುರ ಕ್ಷೇತ್ರದ ಜನರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಅಶೋಕ್ ನಮ್ಮವನು ಎಂದು ಕ್ಷೇತ್ರದ ಜನ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸೌಹಾರ್ದತೆ ಸಂದೇಶ ಸಾರಿದ ಸಮೃದ್ಧಿ ಮಂಜುನಾಥ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆಯಾಗಿದೆ. ರಾಹುಲ್ ಗಾಂಧಿ ಬೀದಿಗೆ ಬಂದಿದ್ದಾರೆ, ಮನೆ ಖಾಲಿ ಮಾಡಿಸಿದ್ದಾರೆ. ರಾಹುಲ್ ಗಾಂಧಿಗೆ ಆದ ಸ್ಥಿತಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಬರಲಿದೆ. ಕೇಂದ್ರ ಕೊಟ್ಟ ಅನುದಾನದಲ್ಲಿ ಕನಕಪುರ ಕ್ಷೇತ್ರ ಅಭಿವೃದ್ಧಿ ಆಗಿದೆ ಎಂದು ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಶೋಕ್ ವಿರುದ್ಧ ಕಾರ್ಯಕರ್ತ ಕಿಡಿ
ಕನಕಪುರದ ಟಿ.ಬೇಕುಪ್ಪೆ ವೃತ್ತದಲ್ಲಿ ಆರ್.ಅಶೋಕ್ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅಡ್ಡಿಪಡಿಸಿದ್ದಾರೆ. ಕನಕಪುರ ಕಾಂಗ್ರೆಸ್ಸಿಗರ ಮನೆ, ಇಲ್ಲಿ ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡಬೇಡಿ. ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಕಸಿದುಕೊಂಡ್ರಿ ಎಂದು ಆಕ್ರೋಶ ಹೊರಹಾಕಿದ್ದಾರೆ.