ಬೆಂಗಳೂರು : ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜಗೋಪಾಲರೆಡ್ಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಹುಲಿಮಂಗಲ ರಾಜಗೋಪಾಲರೆಡ್ಡಿ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.
ಈ ವೇಳೆ ಮಾತನಾಡಿರುವ ಎಚ್.ಡಿ ಕುಮಾರಸ್ವಾಮಿ ಅವರು, ರಾಜಗೋಪಾಲರೆಡ್ಡಿ ಅವರೊಂದಿಗೆ ಎರಡು ದಿನದಿಂದ ಚರ್ಚೆ ಮಾಡಿದ್ದೇವೆ. ಎರಡು ದಿನಗಳ ಸಮಯದ ನಂತರ ಈಗ ಅಂತಿಮವಾಗಿ ಈಗ ಅಭ್ಯರ್ಥಿಯಾಗುವ ಮನಸ್ಸು ಬಂದಿದೆ. ನಾಳೆ ನಾಮಪತ್ರ ಸಲ್ಲಿಕೆ ಮಾಡಲಾಗುತ್ತದೆ. ಜೆಡಿಎಸ್ ಹಾಗೂ ರಾಜಗೋಪಾಲರೆಡ್ಡಿ ಕುಟುಂಬ ಎರಡು ಒಟ್ಟಾಗಿ ಸೇರಿ ಶಕ್ತಿ ವೃದ್ದಿಯಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಾಳೆ ಸಮೃದ್ಧಿ ಮಂಜುನಾಥ್ ನಾಮಪತ್ರ ಸಲ್ಲಿಕೆ : ದೇವೇಗೌಡರ ಆಶೀರ್ವಾದ
ಕಾಂಗ್ರೆಸ್ನಲ್ಲಿ ನಿಷ್ಟಾವಂತರಿಗೆ ಬೆಲೆ ಇಲ್ಲ
ರಾಜಗೋಪಾಲರೆಡ್ಡಿ ಮಾತನಾಡಿ, ಕಾಂಗ್ರೆಸ್ ನಲ್ಲಿ ನಿಷ್ಟಾವಂತರಿಗೆ ಬೆಲೆ ಇಲ್ಲ. ನಾವು ಬೆಂಗಳೂರು ದಕ್ಷಿಣ ಟಿಕೆಟ್ ಗಾಗಿ ಪ್ರಯತ್ನಿಸಿದ್ದೇವೆ. ಆದರೆ, ಅವರು ನಮ್ಮನ್ನು ಗುರುತಿಸದ ಕಾರಣ ನಾವು ಜೆಡಿಎಸ್ ಸೇರ್ಪಡೆಯಾಗಿದ್ದೇವೆ. ಕುಮಾರಸ್ವಾಮಿಯವರು ನಮ್ಮ ಜೊತೆ ಮಾತನಾಡಿದರು. ನಾವು ಕುಟುಂಬಸಮೇತರಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗೊಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರು ಯಾರು ಸಹ ನಮ್ಮನ್ನು ಸಂಪರ್ಕ ಮಾಡಿಲ್ಲ. ಕುಮಾರಸ್ವಾಮಿ ಅವರು ನಮಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ನಾವು ಹಾಗೂ ಪ್ರಭಾಕರ್ ರೆಡ್ಡಿ ಇಬ್ಬರೂ ಒಟ್ಟಿಗೆ ಇರುತ್ತೇವೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಜೆಡಿಎಸ್ ವತಿಯಿಂದ ಈ ಬಾರಿ ನಾವು ಖಂಡಿತ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.