ವಿಜಯಪುರ : ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಅರೆಹುಚ್ಚ’ ಎಂದು ವಿವಾದಾತ್ಮಕ ಹೇಳಿಕೆ ಹರಿಬಿಟ್ಟಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯಂತ ನಾಯಕ ಬೇಕಿದೆ. ಜನರು ರಾಹುಲ್ ಗಾಂಧಿಯಂತ ಅರೆಹುಚ್ಚನನ್ನು ಪ್ರಧಾನಿ ಮಾಡ್ತಾರಾ? ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶದ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದನ್ನ ನಾನು ಸ್ವಾಗತಿಸ್ತೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶದಿಂದ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ‘ಸರ್ವಾಧಿಕಾರಕ್ಕೆ ದಾರಿ, ಆಯ್ಕೆ ನಮ್ಮ ಕೈಯಲ್ಲಿದೆ’ : ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ
ನನಗು ಸಾಕಷ್ಟು ಅವಮಾನವಾಗಿದೆ
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್, ಸವದಿ ಬಿಜೆಪಿ ತೊರಿದಿದ್ದಕ್ಕೆ ಬೇಸರ ವ್ಯಕ್ತ ಪಡೆಸಿದ್ದಾರೆ. ರಾಜಕಾರಣದಲ್ಲಿ ನನಗು ಸಾಕಷ್ಟು ಅಪಮಾನ, ಅವಮಾನವಾಗಿದೆ. ನಾವು ಸಹನೆ, ತಾಳ್ಮೆಯಿಂದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನಾನು ಡಿಸಿಎಂ ಆಗಲು ಅರ್ಹನಾಗಿದ್ದೆ
ನಾನು ಮಂತ್ರಿಯಾಗಲು, ಡಿಸಿಎಂ ಅರ್ಹನಾಗಿದ್ದೆ. ಆದ್ರೆ ಯಾವುದೋ ಕಾರಣಕ್ಕೆ ಕೊಡಲಿಲ್ಲ. ಪಕ್ಷಕ್ಕೆ ಅವಶ್ಯಕತೆ ಇದ್ದಾಗ ಮಾಡಿಯೇ ಮಾಡ್ತಾರೆ. ಇದಕ್ಕೆ ಸಿಟ್ಟಿಗೆ ಬಂದು ಪಕ್ಷ ಬಿಡಬಾರದು. ನಾನು ಪಕ್ಷಕ್ಕೆ ಹಗುರವಾಗಿ ಮಾತನಾಡಿಲ್ಲ. ನಮ್ಮದು ವ್ಯಕ್ತಿಗತ ಜಗಳವಿತ್ತು. ಜೆಡಿಎಸ್ ನಲ್ಲಿ ಇದ್ದಾಗಲು ಸಿದ್ದಾಂತ ಬಿಟ್ಟಿರಲಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.