ಚಿತ್ರದುರ್ಗ : ವಯಸ್ಸಿನ ಆಧಾರದಲ್ಲಿ ಈ ಬಾರಿ ಬಿಜೆಪಿ ಟಿಕೆಟ್ ಮಿಸ್ ಆಗುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗ ಹಾಲಿ ಬಿಜೆಪಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನಗೆ ಬೇರೆ ಬೇರೆ ಪಾರ್ಟಿಯಿಂದ ಪಕ್ಷಕ್ಕೆ ಬರುವಂತೆ ಆಹ್ವಾನ ಬಂದಿದೆ. ಆದರೆ, ಬಿಜೆಪಿ ಪಟ್ಟಿ ಬಿಡುಗಡೆಯಾಗುವವರೆಗೆ ಬೇರೆ ನಿರ್ಧಾರ ಇಲ್ಲ. ಮೊದಲು ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಲಿ, ಆಮೇಲೆ ನೋಡೋಣ ಎಂದು ತಿಪ್ಪಾರೆಡ್ಡಿ ಹೇಳಿದ್ದಾರೆ.
ನಾನು ಕಳೆದ ಮೂರು ದಿನಗಳಿಂದ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. 75ವರ್ಷ ದಾಟಿದವರಿಗೆ ಟಿಕೆಟ್ ನೀಡಲ್ಲ ಎಂದು ಬಿಜೆಪಿ ಹೈ ಕಮಾಂಡ್ ಹೇಳಿದ್ದಾರೆ ಎಂದು ಸುದ್ದಿ ಇದೆ. ಈ ಕುರಿತು ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನನಗೆ ಕೇಂದ್ರ ನಾಯಕರಿಂದ ಯಾವುದೇ ಕರೆ ಬಂದಿಲ್ಲ. ನನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ನಮ್ಮಜಿಲ್ಲಾಧ್ಯಕ್ಷ ಹಾಗೂ ವರಿಷ್ಠರಿಗೂ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಇಷ್ಟು ವರ್ಷ ಪಕ್ಷ ಕಟ್ಟಿದ್ದಕ್ಕೆ ಬೆಲೆಯೇ ಇಲ್ವಾ? : ವರಿಷ್ಠರಿಗೆ ಶೆಟ್ಟರ್ ಪ್ರಶ್ನೆ
ವೀರಶೈವ ಸಮುದಾಯಕ್ಕೆ ಟಿಕೆಟ್?
ಟಿಕೆಟ್ ವಿಷಯದಲ್ಲಿ ವರಿಷ್ಠರ ನಿರ್ಣಯವೇ ಅಂತಿಮವಾಗಿರುತ್ತದೆ. ನಾವು ಅದರ ವಿರುದ್ಧ ಹೋಗುವುದಕ್ಕೆ ಆಗಲ್ಲ. ನನಗೆ ವರಿಷ್ಠರು ಟಿಕೆಟ್ ಕೊಡಿತ್ತಾರೆಂದು ವಿಶ್ವಾಸವಿದೆ. ಒಂದೆರೆಡು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಗೊಂದಲವಿದೆ. ಕೆಲ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ತಮಗೆ ಟಿಕೆಟ್ ನೀಡುವಂತೆ ಓಡಾಟ ನಡೆಸಿದ್ದಾರೆ. ವೀರಶೈವ ಸಮುದಾಯದವರು ತಮ್ಮ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಆಗ್ರಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನನ್ನ ಪುತ್ರನಿಗೆ ಟಿಕೆಟ್ ಕೇಳಿಲ್ಲ
ನಾನು ನನ್ನ ಮಗನಿಗೆ ಟಿಕೆಟ್ ನೀಡುವಂತೆ ಕೇಳಿಲ್ಲ. ಇದು ಬರೀ ಊಹಾಪೋಹಾದ ಸುದ್ದಿ. ಜೆಡಿಎಸ್ ಪಾರ್ಟಿಯಿಂದ ಹಿರಿಯೂರಲ್ಲಿ ಸ್ಪರ್ಧೆ ಮಾಡುವಂತೆ ಕರೆ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅವರು, ಮೊದಲು ನಾನು ಸ್ವತಂತ್ರವಾಗಿ ಗೆದ್ದಿದ್ದಾಗ ಹಿರಿಯೂರು ಜನತೆಯ ವಿಶ್ವಾಸವಿದೆ. ಈ ಕ್ಷೇತ್ರದ ಜನತೆಯ ವಿಶ್ವಾಸದಷ್ಟೇ ವಿಶ್ವಾಸ ಹಿರಿಯೂರು ಕ್ಷೇತ್ರದ ಜನತೆಯಲ್ಲಿಯೂ ಇದೆ ಎಂದು ಹೇಳಿದ್ದಾರೆ.