ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪದಲ್ಲೇ ರಾಜ್ಯ ಕಾಂಗ್ರೆಸ್ ಗೆ ಮೇಲಿಂದ ಮೇಲೆ ಶಾಕ್ ಎದುರಾಗಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿದೆ.
ಹೌದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಜೆಡಿಎಸ್ ಪಕ್ಷ ಸೇರುವುದು ಖಚಿತವಾಗಿದೆ.
ರಘು ಆಚಾರ್ ಈಗ ಬಾರಿ ತಮಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ವಿಧಾನಪರಿಷತ್ ಸ್ಥಾನಕ್ಕೆ ಸ್ಪರ್ಧೆ ಮಾಡಿರಲಿಲ್ಲ. ಆದರೆ, ಕೊನೆಯ ಕ್ಷಣದಲ್ಲಿ ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್ ನೀಡಿರುವುದರಿಂದ ಬಂಡಾಯ ಸಾರಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಜೊತೆ ಮಾತನಾಡಿರುವ ರಘು ಆಚಾರ್ ಅವರು ಏಪ್ರಿಲ್ 14ಕ್ಕೆ ಪಕ್ಷ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೀನಿ : ಸಿಎಂ ಬೊಮ್ಮಾಯಿ
ರಘು ಆಚಾರ್ ನನ್ನ ಆತ್ಮೀಯ
ರಘು ಆಚಾರ್ ಜೆಡಿಎಸ್ ಸೇರ್ಪಡೆ ಕುರಿತಂತೆ ಜೆಡಿಎಸ್ ಎಂಎಲ್ ಸಿ ಶರವಣ ಪವರ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಘು ಆಚಾರ್ ನನ್ನ ಆತ್ಮೀಯ ಸ್ನೇಹಿತರು. ಜೆಡಿಎಸ್ ಪಕ್ಷಕ್ಕೆ ಬನ್ನಿ ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರಘು ಆಚಾರ್ ಪಕ್ಷ ಸೇರ್ಪಡೆ ಬಗ್ಗೆ ಪಕ್ಷದ ವರಿಷ್ಠರ ಜೊತೆಗೂ ಚರ್ಚಿಸಿದ್ದೇನೆ. ರಘು ಆಚಾರ್ ಅವರು ಏನು ತೀರ್ಮಾನ ಕೈಗೊಳ್ತಾರೆ ನೋಡಬೇಕು. ರಘು ಆಚಾರ್ ಜೆಡಿಎಸ್ಗೆ ಬಂದ್ರೆ ಪಕ್ಷಕ್ಕೆ ಆನೆಬಲ ಬಂದಂತೆ. ಇಂದು ಪಕ್ಷದ ನಾಯಕರ ಸಭೆ ನಡೆಯಲಿದೆ. ಆ ಸಭೆಯಲ್ಲಿ ಈ ಬಗ್ಗೆ ಮಾತುಕತೆ ನಡೆಯಲಿದೆ ಎಂದು ಶರವಣ ಮಾಹಿತಿ ನೀಡಿದ್ದಾರೆ.
ಕೈ ನಾಯಕರಿಗೆ ಥ್ಯಾಂಕ್ಸ್
ಚಿತ್ರದುರ್ಗಕ್ಕೆ ತಮ್ಮನ್ನು ಅಭ್ಯರ್ಥಿಯನ್ನಾಗಿಸಿರುವ ಕಾಂಗ್ರೆಸ್ ಹೈಕಮಾಂಡ್ ಗೆ ಹಾಗೂ ಪಕ್ಷದ ನಾಯಕರಿಗೆ ವೀರೇಂದ್ರ (ಪಪ್ಪಿ) ಅವರು ಧನ್ಯವಾದ ಅರ್ಪಿಸಿದ್ದಾರೆ. ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಬೇಕೆಂದು ತಾವು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ್ದಕ್ಕಾಗಿ ಅವರು ಧನ್ಯವಾದ ಹೇಳಿದ್ದಾರೆ.